ಸಾಮಾಜಿಕ ನ್ಯಾಯ ಪ್ರತಿಪಾದಕನ ಸ್ಮರಣೆ

ಹಾವೇರಿ:ಸಾಮಾಜಿಕ ನ್ಯಾಯ ಪ್ರತಿಪಾದನೆಯ ಮೂಲಕ ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಲು ಶ್ರಮಿಸಿದ ಶ್ರೇಷ್ಠ ಸಮಾಜ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಹೇಳಿದರು.

ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಕಾರ್ವಿುಕರು, ಮಹಿಳೆಯರು, ದಲಿತರು, ಶೋಷಿತರನ್ನು ಪ್ರತ್ಯೇಕ ಸ್ಥಾನಮಾನ, ರಾಜಕೀಯ ಪ್ರಾತಿನಿಧ್ಯದ ಮೂಲಕ ಸಮಾಜ ಮುಖ್ಯವಾಹಿನಿಗೆ ತರಬೇಕು ಎಂಬುದು ಅವರ ಕಾಳಜಿಯಾಗಿತ್ತು ಎಂದರು.

ಜಿ.ಪಂ. ಸಿಇಒ ಕೆ. ಲೀಲಾವತಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಸಿದ್ಧಾಂತಗಳು ಸಮಾಜದ ಆದರ್ಶಗಳಾಗಬೇಕು. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಎಸ್​ಪಿ ಕೆ. ಪರಶುರಾಮ, ಹೆಚ್ಚುವರಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ ಇತರ ಅಧಿಕಾರಿಗಳು ಹಾಗೂ ಸಮಾಜದ ವಿವಿಧ ಮುಖಂಡರು ಭಾಗವಹಿಸಿದ್ದರು.

ಪುತ್ಥಳಿಗೆ ಮಾಲಾರ್ಪಣೆ…
ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿರುವ ಅಂಬೇಡ್ಕರ ಪುತ್ಥಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾಲಾರ್ಪಣೆ ಮಾಡಿದರು. ಹೆಚ್ಚುವರಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಉಪವಿಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ಎಚ್.ಸಿ. ಶಿವಕುಮಾರ, ತಾ.ಪಂ. ಇಒ ಅನ್ನಪೂರ್ಣ ಮುದಕಮ್ಮನವರ ಇತರರಿದ್ದರು.