ಸಿರಗುಪ್ಪ: ತಾನು ಎಲ್ಲರಿಗೂ, ತನಗಾಗಿ ಎಲ್ಲರೂ ಎಂಬ ತತ್ವವನ್ನು ಅಳವಡಿಸಿಕೊಂಡಿರುವ ಸಹಕಾರ ಕ್ಷೇತ್ರ ಬಡಜನರ ಸಾಮಾಜಿಕ, ಆರ್ಥಿಕ ಉನ್ನತಿಯ ಉದ್ದೇಶಹೊಂದಿದೆ ಎಂದು ಸಹಕಾರ ರತ್ನ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮುದಾಯದ ಹಿತವನ್ನು ಕಾಪಾಡುವ ಬಹು ದೊಡ್ಡ ಶಕ್ತಿಯಾಗಿರುವ ಸಹಕಾರ ಕ್ಷೇತ್ರ, ಕೃಷಿ ಕಾರ್ಮಿಕರು, ಗಾಮೆರ್ಂಟ್ ವಲಯ, ಹೈನುಗಾರಿಕೆಯಲ್ಲೂ ಮುಖ್ಯ ಪಾತ್ರ ನಿರ್ವಹಿಸುತ್ತಿದೆ. ಸಹಕಾರ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶ, ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರ, ದೇಶದ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಖಾಸಗಿ ಸಂಸ್ಥೆಗಳು ರೈತರ ಶೋಷಣೆಯಲ್ಲಿ ತೊಡಗಿವೆ. ಆದ್ದರಿಂದ ಸಹಕಾರ ಸಂಘಗಳು ರೈತರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವ ಮೂಲಕ ಶೋಷಣೆಯಿಂದ ಮುಕ್ತಗೊಳಿಸಬೇಕು ಎಂಬ ಆಶಯದೊಂದಿಗೆ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಏಳಿಗೆಗೆ ಸಹಕಾರಿಯಾಗಿದೆ ಎಂದರು.
ಖಾಸಗಿ ಬ್ಯಾಂಕುಗಳು ಬಂಡವಾಳಶಾಹಿಗಳಿಗೆ ಮಾತ್ರ ಸಾಲ ವಿತರಿಸುತ್ತವೆ. ಇವುಗಳಿಗೆ ಪರ್ಯಾಯವಾಗಿ ಸಹಕಾರ ಸಂಘಗಳಲ್ಲಿ ರೈತರು, ಬಡವರು ಸಾಲ ಪಡೆಯುವ ಮೂಲಕ ಕೃಷಿ, ವ್ಯಾಪಾರ ಚಟುವಟಿಕೆಗಳನ್ನು ಕೈಗೊಂಡು ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ತಂಡ ರೈತರ ಏಳಿಗೆಗೆ ಸದಾ ಶ್ರಮಿಸುತ್ತಾ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತದೆ ಎಂದು ಚೊಕ್ಕ ಬಸವನಗೌಡ ಹೇಳಿದರು.