ಸಾಮರ್ಥ್ಯವಿದ್ದೂ ಅಭಿವೃದ್ಧಿಯಾಗದ ಕರಾವಳಿನಾಡು

ಸುಂದರ ಕಡಲತೀರ, ಬಂದರು, ಹಿನ್ನೀರು ಪ್ರದೇಶಗಳು, ಸೀಬರ್ಡ್ ಮತ್ತು ಜಲವಿದ್ಯುತ್ ಯೋಜನೆಗಳು, ರಿವರ್ರ್ಯಾಫ್ಟಿಂಗ್ಗೆ ಅವಕಾಶವಿರುವ ನದಿಗಳು ಹೀಗೆ ಪ್ರವಾಸಿ ಆಕರ್ಷಣೆಯ ತಾಣಗಳು ಕಾರವಾರ ಜಿಲ್ಲೆಯಲ್ಲಿ ಹೇರಳವಾಗಿದ್ದರೂ, ನಿರೀಕ್ಷಿತ ಮಟ್ಟಕ್ಕೆ ಅದು ಅಭಿವೃದ್ಧಿಗೊಂಡಿಲ್ಲ. ಈ ನಿಟ್ಟಿನಲ್ಲಿ ಗೋವಾ, ಕೇರಳ ರಾಜ್ಯಗಳಲ್ಲಿ ಕಂಡುಬರುವ ಭರಾಟೆಯ ಚಟುವಟಿಕೆಯೂ ಇಲ್ಲಿ ಕಾಣುವುದಿಲ್ಲ.

ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾನು ಕಾರವಾರಕ್ಕೆ ತೆರಳಬೇಕಾಗಿ ಬಂತು. ಕರ್ನಾಟಕ-ಗೋವಾ ಗಡಿಭಾಗದಲ್ಲಿ ನೆಲೆಗೊಂಡಿರುವ ಈ ಸುಂದರ ಕರಾವಳಿನಾಡು ಪಶ್ಚಿಮಘಟ್ಟ ಪ್ರದೇಶದಲ್ಲಿರುವುದು ಗೊತ್ತಿರುವ ಸಂಗತಿಯೇ. ಬೆರಗುಗೊಳಿಸುವ ಕಾಡುಗಳು, ಚಿತ್ತಾಕರ್ಷಕ ಪ್ರಕೃತಿ ಸೊಬಗು, ಹುಚ್ಚೆಬ್ಬಿಸುವ ಭೂದೃಶ್ಯವನ್ನೊಳಗೊಂಡ ರಮ್ಯ ಕಡಲತೀರಗಳು, ಒಡ್ಡೊಡ್ಡಾದ ಬೆಟ್ಟಗಳು ಮತ್ತು ನಿಚ್ಚಳವಾದ ಹಿನ್ನೀರು ಮೊದಲಾದವು ಇಲ್ಲಿನ ದೃಶ್ಯವೈಭವಕ್ಕೆ ತಮ್ಮದೇ ಕೊಡುಗೆ ನೀಡಿವೆ. ಅರಬ್ಬೀ ಸಮುದ್ರದ ಅಂಚಿನಿಂದ ಮೇಲೆದ್ದಂತೆ ಕಾಣುವ ಇಲ್ಲಿನ ಪರ್ವತಗಳ ಸೊಬಗು ನಿಜಕ್ಕೂ ಸಮ್ಮೋಹಕ. ಒಂದು ಕಾಲಕ್ಕೆ ಬ್ರಿಟಿಷ್ ಸರ್ಕಾರದ ಪ್ರಧಾನ ಕಾರ್ಯಸ್ಥಾನವಾಗಿದ್ದ ಕಾರವಾರ, ಅರಬ್ಬೀ ಸಮುದ್ರಮಾರ್ಗವಾಗಿ ನಡೆಯುತ್ತಿದ್ದ ವ್ಯಾಪಾರದ ಕೇಂದ್ರವಾಗಿದ್ದು ಅರಬ್ಬರು, ಡಚ್ಚರು, ಪೋರ್ಚುಗೀಸರು ಮತ್ತು ಬ್ರಿಟಿಷರು ಇಲ್ಲಿ ವ್ಯವಹಾರ ಚಟುವಟಿಕೆಯನ್ನು ನಡೆಸಿದ್ದರು ಎಂಬುದು ಇತಿಹಾಸ ನೀಡುವ ಮಾಹಿತಿ.

ನ್ಯಾಯಸಮ್ಮತ ಪರಿಹಾರ ನೀಡಿಕೆ: ಪ್ರಮುಖವಾಗಿ ಇದೊಂದು ಅರಣ್ಯಜಿಲ್ಲೆ. ಹೀಗಾಗಿ ಸಹಜವಾಗಿಯೇ ಇಲ್ಲಿ ಪರಿಸರಸಂಬಂಧಿತ ಅನೇಕ ಸಮಸ್ಯೆಗಳಿದ್ದವು. ನದಿಯ ಒಂದು ಬದಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯೊಂದು ಅಸ್ತಿತ್ವಕ್ಕೆ ಬರುತ್ತಿದ್ದುದರ ಜತೆಗೆ, ಕೆಲವೊಂದು ಜಲವಿದ್ಯುತ್ ಯೋಜನೆಗಳಿಗೂ ಇದು ನೆಲೆಯಾಗಿತ್ತು. ಸೀಬರ್ಡ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು ಮತ್ತು ಸ್ಥಳೀಕರು ಇದರ ವಿರುದ್ಧ ಬಲವಾಗಿ ಪ್ರತಿಭಟಿಸುತ್ತಿದ್ದರು. ಇದು ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದ ಯೋಜನೆಯಾಗಿದ್ದರೂ, ಅಧಿಕಾರಿಗಳು ಸಂತ್ರಸ್ತರಿಗೆ ನೀಡಲು ಪ್ರಸ್ತಾವಿಸಿದ್ದ ಪರಿಹಾರಧನ ನಿಜಕ್ಕೂ ತೀರಾ ಕಮ್ಮಿಯಾಗಿತ್ತು- ಅಂದರೆ, ಪ್ರತಿ ಎಕರೆಗೆ ಕೆಲವೇ ಸಾವಿರ ರೂಪಾಯಿ ನೀಡುವ ಪ್ರಸ್ತಾವ ಅದಾಗಿತ್ತು. ಪ್ರತಿಭಟನಾನಿರತ ಮೀನುಗಾರರು ಇದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ಇದು ನಿಜಕ್ಕೂ ಗಂಭೀರ ಮತ್ತು ಹೃದಯವಿದ್ರಾವಕ ಸಮಸ್ಯೆಯೇ ಆಗಿತ್ತು. ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಪ್ರತಿಭಟನಾನಿರತರ ವಿರೋಧವೇನೂ ಇರಲಿಲ್ಲ. ‘ಒಂದೊಮ್ಮೆ ಇದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಯೋಜನೆಯಾಗಿದ್ದಲ್ಲಿ ನಾವಿದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ, ಆದರೆ ನಮಗೆ ನ್ಯಾಯಸಮ್ಮತವಾದ ಪರಿಹಾರ ನೀಡಿ’ ಎಂಬುದಷ್ಟೇ ಅವರ ಒಕ್ಕೊರಲ ಬೇಡಿಕೆಯಾಗಿತ್ತು. ಅವರ ಬೇಡಿಕೆ ಸಮಂಜಸವಾಗಿದೆಯೆಂದು ನನಗೆ ತೋರಿತು. ಈ ಒಂದಿಡೀ ಸಮಸ್ಯೆಯನ್ನು ಅಧ್ಯಯನ ಮಾಡಿದ ನಂತರ, ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರಿಗೆ ವಿಷಯವನ್ನು ಕೂಲಂಕಷ ವಿವರಿಸಿದೆ; ಪರಿಹಾರಧನ ನಿಗದಿಯಾಗಿದ್ದ ಮತ್ತು ಘೊಷಣೆಯಾಗಿದ್ದ ಪರಿಯನ್ನು ಕಂಡು ಅವರು ಕೂಡ ನಿಬ್ಬೆರಗಾಗಿದ್ದರು.

ಮುಖ್ಯಮಂತ್ರಿಯವರ ಅನುಮತಿ ಪಡೆದ ನಂತರ, ಉತ್ತಮವಾದ ಪುನರ್ವಸತಿ ಪ್ಯಾಕೇಜನ್ನು ನೀಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಯನಕ್ಕೆಂದು ನಾನು ಅಧಿಕಾರಿಗಳನ್ನು ಕಳಿಸಿದೆ. ಆ ಪ್ಯಾಕೇಜ್ನ ವಿವರಗಳನ್ನು ತರಿಸಿಕೊಂಡು ಅಧ್ಯಯನ ಮಾಡಿದ ನಂತರ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಪಾವತಿಸಿದ ರೀತಿಯಲ್ಲೇ ಕಾರವಾರದಲ್ಲೂ ಪರಿಹಾರ ನೀಡಬೇಕು ಎಂಬ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆವು. ಸರ್ಕಾರ ಇದನ್ನು ಅನಾಯಾಸವಾಗಿ ಒಪ್ಪಿತು. ತರುವಾಯ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೂ ಕಳಿಸಿದೆವು. ಅಂದಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಖುದ್ದಾಗಿ ಯೋಜನಾಸ್ಥಳಕ್ಕೆ ಭೇಟಿಯಿತ್ತು, ಈ ಒಂದಿಡೀ ಸಮಸ್ಯೆಯನ್ನು ತಲರ್ಸ³ ಅವಲೋಕಿಸಿದರು. ಈ ಎಲ್ಲದರ ಫಲವಾಗಿ, ಜನರಿಗೆ ನ್ಯಾಯಸಮ್ಮತ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದೆವು. ಸದರಿ ಯೋಜನೆಯ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ಕ್ರಮೇಣ ಗೌಣವಾಗುತ್ತಾ ಹೋಯಿತು.

ಹಳೆಯ ಪುನರ್ವಸತಿ ಸಮಸ್ಯೆಗಳನ್ನು ಬಗೆಹರಿಸಿದ್ದು: ಸೀಬರ್ಡ್ ಯೋಜನೆಯಲ್ಲಿ ಸ್ಪಷ್ಟವಾಗಿ ಕಂಡುಬಂದ ಸಂವೇದನಾರಾಹಿತ್ಯವು ನಮ್ಮನ್ನು ಅತೀವವಾಗಿ ಎಚ್ಚರಿಸಿತು ಎನ್ನಬೇಕು. ಹೀಗಾಗಿ, ಕದ್ರಾ, ಕೊಡಸಳ್ಳಿ ಹಾಗೂ ಕಾಳಿ ಮೊದಲಾದ ಇತರ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಅವಲೋಕಿಸಲು ನಿರ್ಧರಿಸಿದೆವು. ಪುನರ್ವಸತಿ ಸಂಬಂಧಿತ ಸಮಸ್ಯೆಗಳು ಆ ಯೋಜನೆಗಳಲ್ಲೂ ಇದ್ದವು. ಸ್ಥಳಾಂತರಿಸಲ್ಪಟ್ಟ ಜನರ ಅನೇಕ ಬೇಡಿಕೆಗಳು ಈಡೇರದೆ ಬಾಕಿ ಉಳಿದಿದ್ದವು. ಕೆಲವೊಂದು ಜನರಿಗೆ ಪರ್ಯಾಯ ಜಮೀನುಗಳು ದಕ್ಕಿರಲಿಲ್ಲ. ಹೀಗಾಗಿ, ಈ ಎಲ್ಲ ಪ್ರಕರಣಗಳನ್ನು ನಾನು ಕೂಲಂಕಷವಾಗಿ ಪರಿಶೀಲಿಸಿದೆ. ಯಾವುದೇ ಹಂತದಲ್ಲಿ ಏನೇ ಅಸಾಂಗತ್ಯ ಅಥವಾ ವ್ಯತ್ಯಾಸ ಕಂಡುಬಂದಾಗಲೆಲ್ಲ, ಪ್ರತಿಯೊಬ್ಬರ ಬೇಗುದಿಗಳು ನಿವಾರಣೆಯಾಗಿ ಪರಿಹಾರ ದಕ್ಕುವಂತಾಗುವ ಮಟ್ಟಿಗೆ ನಾವು ಎಲ್ಲ ಪ್ರಯತ್ನಗಳನ್ನೂ ಮಾಡಿದೆವು. ಪುನರ್ವಸತಿ ಕಾಲನಿಗಳಲ್ಲಿ ಕೂಡ, ಜಿಲ್ಲಾ ಪರಿಷತ್ ಮತ್ತು ಇತರ ಇಲಾಖೆಗಳಿಂದ ಬರುವ ಹೇರಳ ಅನುದಾನಗಳನ್ನು ವಿಧಿವಿಹಿತವಾಗಿ ಕೊಡಮಾಡಿದೆವು.

ಕಡಲತೀರದ ಅಭಿವೃದ್ಧಿ: ಪ್ರವಾಸೋದ್ಯಮದ ಪ್ರವರ್ತನೆ ಅಥವಾ ಉತ್ತೇಜನದ ವಿಷಯದಲ್ಲೂ ನಾವು ಅನೇಕ ಕ್ರಮಗಳನ್ನು ಕೈಗೊಂಡೆವು. ಕಾಳಿನದಿಯ ಪಕ್ಕದಲ್ಲಿ ಒಂದು ಕೋಟೆಯಿತ್ತು; ಒಂದಷ್ಟು ಪೂರಕ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅದನ್ನು ಅಭಿವೃದ್ಧಿಪಡಿಸಿದೆವು. ಈ ಐತಿಹಾಸಿಕ ಕೋಟೆಯು ಮೂಲತಃ ಮರಾಠರ ಆಳ್ವಿಕೆಯ ಗಡಿರೇಖೆಯಾಗಿತ್ತು. ಇದರ ಕೆಳಭಾಗದಲ್ಲಿ ರೆಸಾರ್ಟ್ ಒಂದನ್ನು ನಿರ್ವಿುಸಲಾಯಿತು. ಇನ್ನು, ತೀರಾ ಕೊಳಕಾಗಿದ್ದ ಕಾರವಾರ ಕಡಲತೀರವನ್ನು ಅಭಿವೃದ್ಧಿಪಡಿಸುವುದು ಮತ್ತೊಂದು ಪ್ರಮುಖ ಕೆಲಸವಾಗಿತ್ತು. ಹೀಗಾಗಿ, ಅದನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸುವ ವ್ಯವಸ್ಥಿತ ಪ್ರಯತ್ನದಲ್ಲಿ ತೊಡಗಿಸಿಕೊಂಡೆವು. ಮಂಗಳೂರಿನ ಪಿಲಿಕುಳ ಯೋಜನೆಯು ನನ್ನ ಮನದಲ್ಲಿದ್ದುದರಿಂದ, ಈ ಪ್ರದೇಶದಲ್ಲೂ ಅಂಥದೇ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು ನನ್ನ ಆಲೋಚನೆಯಾಗಿತ್ತು. ಕಡಲತೀರದ ಸಮೀಪದಲ್ಲೇ ನಮಗೆ ಸೂಕ್ತ ಜಮೀನು ಕಂಡುಬಂದು, ಆಟದ ಟ್ರೇನನ್ನು ಅಲ್ಲಿ ವ್ಯವಸ್ಥೆಗೊಳಿಸಲು ಯೋಜಿಸಿದೆವು. ಸಂಗೀತ ಕಾರಂಜಿ ಹಾಗೂ ತಾರಾಲಯವನ್ನೂ ಅಲ್ಲಿ ನಿರ್ವಿುಸಿದೆವು. ಅಲ್ಲಿದ್ದ ಪುಟ್ಟ ಮತ್ಸ್ಯಾಲಯವೂ ನವೀಕರಿಸಲ್ಪಟ್ಟು ಅತೀವ ಜನಪ್ರಿಯತೆಯನ್ನೂ ಪಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲಾಯಿತು. ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅನೇಕ ಈಜುಗಾರರು ಕಾರವಾರದಲ್ಲಿರುವ ಕಾರಣ, ಈಜುಕೊಳವೊಂದನ್ನು ನಿರ್ವಿುಸುವುದೂ ನಮ್ಮ ಬಯಕೆಯಾಗಿತ್ತು; ಆದರೆ ಅನಿವಾರ್ಯ ಕಾರಣಗಳಿಂದಾಗಿ ಈ ಯೋಜನೆ ಕೈಗೂಡಲಿಲ್ಲ.

ಅನಾಮಿಕ ದೂರುಗಳನ್ನು ಆದರಿಸಬಾರದು: ಕೊಂಕಣ ರೇಲ್ವೆ ಯೋಜನೆ ಸಂಬಂಧಿತ ಸಮಸ್ಯೆಗಳನ್ನೂ ನಾವು ಇತ್ಯರ್ಥಪಡಿಸಿದೆವು. ಅರಣ್ಯಭೂಮಿಯ ಒತ್ತುವರಿ, ಅರಣ್ಯ ಉತ್ಪನ್ನಗಳ ಕಳ್ಳಸಾಗಣೆ, ಮರಗಳನ್ನು ಅಕ್ರಮವಾಗಿ ಕತ್ತರಿಸುವುದು ಮೊದಲಾದ ಅರಣ್ಯಸಂಬಂಧಿ ಸಮಸ್ಯೆಗಳೂ ಇದರಲ್ಲಿ ಸೇರಿದ್ದವು. ಕೇರಳದಂಥ ನೆರೆರಾಜ್ಯಗಳಿಂದ ಬರುವ ಜನರು ಒಳನಾಡಿನ ಪ್ರದೇಶಗಳಲ್ಲಿ ನೆಲೆಯೂರಿ, ಮರಗಳನ್ನು ಕಡಿಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಂಬ ದೂರುಗಳೂ ಬರುತ್ತಿದ್ದವು. ಅನಾಮಿಕ ದೂರುಗಳಲ್ಲಿ ನಂಬಿಕೆ ಇಡಬಾರದು ಎಂಬುದು ಕಾರವಾರದ ಕುರಿತಾಗಿದ್ದ ಮತ್ತೊಂದು ಸ್ವಾರಸ್ಯಕರ ಸಂಗತಿ (ಇದು ಬ್ರಿಟಿಷರ ಕಾಲಾವಧಿಯಿಂದಲೂ ಗೆಜೆಟ್ನಲ್ಲಿ ದಾಖಲಿಸಲ್ಪಟ್ಟಿದೆ!). ನನಗೆ ಬರುತ್ತಿದ್ದ ದೂರುಗಳಲ್ಲಿ ಬರೋಬ್ಬರಿ ಶೇ. 50ರಷ್ಟು ಭಾಗ ಅನಾಮಿಕ ದೂರುಗಳೇ ಆಗಿರುತ್ತಿದ್ದು, ವೈಯಕ್ತಿಕ ಸಮಸ್ಯೆಗಳು ಅವುಗಳ ಹೂರಣವಾಗಿರುತ್ತಿತ್ತು. ವೈಯಕ್ತಿಕ ವಿಷಯಗಳನ್ನು ಬರಹದ ರೂಪದಲ್ಲಿ ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವ ಪರಿಪಾಠ ಅಲ್ಲಿನ ಜನರಲ್ಲಿತ್ತು ಎಂಬುದಕ್ಕೆ ಇದೊಂದು ನಿದರ್ಶನ.

ಮರೀಚಿಕೆಯಾಗಿರುವ ಅಭಿವೃದ್ಧಿ: ಕಾರವಾರದಲ್ಲಿ ಅನೇಕ ಜನರು ಆಭರಣ ತಯಾರಿಕಾ ಕಾರ್ಯದಲ್ಲಿ ತೊಡಗಿಸಿಕೊಂಡವರಾದ ಕಾರಣ, ಅವರನ್ನು ಗಮನದಲ್ಲಿಟ್ಟುಕೊಂಡು ಒಂದಷ್ಟು ಯೋಜನೆಗಳನ್ನು ರೂಪಿಸಿದೆವು; ಆದರೆ ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ನನ್ನ ಗ್ರಹಿಕೆಯ ಪ್ರಕಾರ, ಈ ಜಿಲ್ಲೆಯು ತನಗಿರುವ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆದಿಲ್ಲ, ಅಭಿವೃದ್ಧಿಯಾಗಿಲ್ಲ. ಗೋವಾಕ್ಕೆ ನಿಕಟವಾಗಿರುವ ಈ ಜಿಲ್ಲೆಯಲ್ಲಿ ಒಂದು ಬಂದರು ಇದೆ. ಅಷ್ಟೇ ಅಲ್ಲ, ಸೀಬರ್ಡ್ ಯೋಜನೆ, ಕಡಲತೀರಗಳು, ‘ರಿವರ್ರ್ಯಾಫ್ಟಿಂಗ್’ಗೆ ಅನುವುಮಾಡಿಕೊಡುವ ನದಿಗಳು, ಜಲವಿದ್ಯುತ್ ಯೋಜನೆಗಳು, ಹಿನ್ನೀರು ಪ್ರದೇಶಗಳು ಹೀಗೆ ವಿಪುಲ ಆಕರ್ಷಣೀಯ ತಾಣಗಳಿವೆ. ಆದರೂ ಈ ಸಾಮರ್ಥ್ಯ-ಸಂಪನ್ಮೂಲಗಳಿಗೆ ಅನುಸಾರವಾಗಿ ಕಾರವಾರ ಜಿಲ್ಲೆ ಅಭಿವೃದ್ಧಿಗೊಂಡಿಲ್ಲ. ಕೇರಳ ಮತ್ತು ಗೋವಾ ರಾಜ್ಯಗಳು ಈ ನಿಟ್ಟಿನಲ್ಲಿ ಭರಾಟೆಯ ಚಟುವಟಿಕೆಗಳನ್ನೇ ನಡೆಸುತ್ತಿವೆ. ಈ ಎರಡು ರಾಜ್ಯಗಳ ನಡುವೆ ಇರುವ ಕರ್ನಾಟಕ ರಾಜ್ಯವು, ಕಾರವಾರದಲ್ಲಿ ಅತ್ಯುತ್ತಮ ಕಡಲತೀರಗಳನ್ನು ಹೊಂದಿದ್ದರೂ, ಅವಕ್ಕೆ ವಾಸ್ತವವಾಗಿ ದಕ್ಕಬೇಕಾದಷ್ಟು ಪ್ರಮಾಣದಲ್ಲಿ ಜನಪ್ರಿಯತೆ ಸಿಕ್ಕಿಲ್ಲ. ಈ ಜಿಲ್ಲೆಯಲ್ಲಿ ‘ಓಂ ಬೀಚ್’ ಎಂದೇ ಪ್ರಖ್ಯಾತವಾದ ಕಡಲತೀರವಿದ್ದು, ಹೇರಳ ವಿದೇಶಿ ಪ್ರವಾಸಿಗರೂ ಅಲ್ಲಿಗೆ ಬರುತ್ತಾರೆ; ಆದರೆ ಇವರು ನಾವು ಬಯಸುವ ಸ್ವರೂಪದ ಪ್ರವಾಸಿಗರಲ್ಲ ಎಂಬುದು ವಿಷಾದನೀಯ.

ಸಿದ್ದಿ ಜನಾಂಗದವರು ಮತ್ತು ಇತರ ಸ್ಥಳೀಕರನ್ನು ಒಳಗೊಂಡ ಸಾಕ್ಷರತಾ ಆಂದೋಲನವನ್ನೂ ನಾವು ದೊಡ್ಡ ಪ್ರಮಾಣದಲ್ಲಿ ಶುರುಮಾಡಿದೆವು. ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ನಾವು ಗಳಿಸಿದ ಅನುಭವವೆಲ್ಲವನ್ನೂ ಇಲ್ಲಿ ಪುನರಾವರ್ತಿಸಲು ಯತ್ನಿಸಿದೆವು. ಅದೊಂದು ಅದ್ಭುತ ಅನುಭವವಾಗಿತ್ತು. ಕಾರವಾರದಲ್ಲಿನ ಜನರ ಮನೋಗುಣ ಇತರ ನಗರಗಳಿಂತ ವಿಭಿನ್ನ ಎನ್ನಲಡ್ಡಿಯಿಲ್ಲ; ಅವರದ್ದು ಸ್ವಲ್ಪ ಜಡಸ್ವಭಾವ. ಆದರೆ ದೂರು ನೀಡುವುದರಲ್ಲಿ ಅವರು ಕ್ರಿಯಾಶೀಲರು. ಅಲ್ಲಿ ಸಿಬ್ಬಂದಿ ವ್ಯವಸ್ಥೆ ಸಮಾಧಾನಕರವಾಗಿತ್ತಾದರೂ, ಬಹುತೇಕ ಹುದ್ದೆಗಳು ಖಾಲಿ ಉಳಿದಿದ್ದವು; ಅವುಗಳಲ್ಲಿ ತೊಡಗಿಸಿಕೊಳ್ಳುವಲ್ಲಿನ ಜನರ ನಿರಾಸಕ್ತಿಯೇ ಇದಕ್ಕೆ ಕಾರಣವಾಗಿತ್ತು.

ಪುಸ್ತಕ ಬರೆದ ಅನುಭವ: ಒಟ್ಟಾರೆಯಾಗಿ ಹೇಳುವುದಾದರೆ, ಕಾರವಾರದಲ್ಲಿ ದಕ್ಕಿಸಿಕೊಂಡ ಅನುಭವ ಸಮೃದ್ಧವಾಗಿತ್ತು ಮತ್ತು ಆರಾಮದಾಯಕವಾಗಿತ್ತು. ’ಔಜ್ಛಿಛಿ ಚ್ಞಛ ಕಛಿಚ್ಚಛಿ’ ಎಂಬ ನನ್ನ ಪುಸ್ತಕವನ್ನು ನಾನು ಬರೆದಿದ್ದು ಇಲ್ಲೇ. ವೃತ್ತಿಜೀವನದಲ್ಲಾದ ಕೆಲ ವಿಶಿಷ್ಟ ಅನುಭವಗಳನ್ನು ಅಕ್ಷರರೂಪದಲ್ಲಿ ದಾಖಲಿಸುವುದಕ್ಕೆ ಕಾಲಾವಕಾಶ ಮಾಡಿಕೊಟ್ಟ ನೆಲವಿದು. ಸುಮಾರು ಒಂದು ವರ್ಷದವರೆಗೆ ಇಲ್ಲಿ ಸೇವೆ ಸಲ್ಲಿಸಿದೆ. ತರುವಾಯದಲ್ಲಿ, ಉನ್ನತ ಅಧ್ಯಯನಕ್ಕೆಂದು (ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಮಾಸ್ಟರ್ಸ್ ಪದವಿ ಪಡೆಯಲು) ಇಂಗ್ಲೆಂಡ್ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯಕ್ಕೆ ತೆರಳಲು ನನಗೆ ಅನುಮತಿ ಸಿಕ್ಕಿತು. ಆದರೆ, ಮಾಸ್ಟರ್ಸ್ ಪದವಿ ಪಡೆದ ನಂತರ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ನನಗೆ ಸಿಗಲಿಲ್ಲವೆನ್ನಿ. ನನಗೆ ಮಾತ್ರವಲ್ಲ, ಅನೇಕ ಜನರ ವಿಷಯದಲ್ಲೂ ಹೀಗಾಗುತ್ತದೆ.

Leave a Reply

Your email address will not be published. Required fields are marked *