ಸಾಫ್ಟ್‌ವೇರ್ ಕಂಪನಿಗಳಿಂದ ವಾಣಿಜ್ಯ ಒಪ್ಪಂದ

ನೆಲಮಂಗಲ: ಜಪಾನಿನ ನಾಗಸಾಕಿಯ ಇಕೀನಗರದ ಮೇಯರ್ ಹಾಗೂ ತಾಲೂಕಿನ ಬಿನ್ನಮಂಗಲದ ವಿಸಿಎನ್‌ಆರ್ ಸಾಫ್ಟ್‌ವೇರ್ ಕಂಪನಿ ಅಧಿಕಾರಿಗಳು ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದಾರೆ.

ಬಿನ್ನಮಂಗಲದ ವಿಸಿಎನ್‌ಆರ್ ಸಾಫ್ಟ್‌ವೇರ್ ಕಂಪನಿಗೆ ಶುಕ್ರವಾರ ಭೇಟಿ ನೀಡಿದ್ದ ನಾಗಸಾಕಿಯ ಇಕೀ ನಗರದ ಮೇಯರ್ ಹಿರೋಕಾಜು ಶಿರಕಾವ ನೇತೃತ್ವದ ಜನಪ್ರತಿನಿಧಿ, ಅಧಿಕಾರಿಗಳ ತಂಡ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸ್‌ಟಾವೇರ್ ಕಂಪನಿ ತೆರೆದು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿ ಅತ್ಯಾಧುನಿಕ ತಂತ್ರಾಂಶ ಅಭಿವೃದ್ಧಿಪಡಿಸಿರುವುದು ಒಂದೆಡೆಯಾದರೆ ಜರ್ಮನ್ ತಂತ್ರಜ್ಞಾನದ ಪರಿಕಲ್ಪನೆ ಆಧಾರದಲ್ಲಿ 6 ನಿಮಿಷದಲ್ಲಿ ಮನುಷ್ಯನ ಆರೋಗ್ಯ ತಪಾಸಣೆ ಮಾಡಿ ದೇಹದ ಆರೋಗ್ಯದ ಸ್ಥಿತಿಗತಿ, ಭವಿಷ್ಯದಲ್ಲಿ ಬರಬಹುದಾದ ಅನಾರೋಗ್ಯ ಸಾಧ್ಯತೆ ತಿಳಿಯಪಡಿಸುವ ಅತ್ಯಾಧುನಿಕ ಉಪಕರಣವನ್ನು ವಿಸಿಎನ್‌ಆರ್ ಅಭಿವೃದ್ಧಿಪಡಿಸಿದೆ. ಈ ಉಪಕರಣದ ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದಿರುವವರಿಗೆ ದೊರಕಿಸುವ ಕಂಪನಿಯ ಆಶಯದ ಬಗ್ಗೆ ಇಕೀನಗರ ಮೇಯರ್ ಆಸಕ್ತಿ ವಹಿಸಿದ್ದಾರೆ.

ವಿಶೇಷ ಜಪಾನಿ ಸಾಂಸ್ಕೃತಿಕ ಪಾರ್ಕ್: ಜಪಾನ್‌ನ ನಾಗಸಾಕಿ ವಲಯದಲ್ಲಿ ವಿಸಿಎನ್‌ಆರ್ ಸ್‌ಟಾವೇರ್ ಅಭಿವೃದ್ಧಿ ಉದ್ದಿಮೆ ಸ್ಥಾಪನೆ ಮಾಡುವುದು, ಕಂಪನಿ ಮಾನವ ಸಂಪನ್ಮೂಲ ವಿನಿಮಯ, ನಾಗಸಾಕಿ ನಾಗರಿಕರ ಆರೋಗ್ಯ ಸುಧಾರಣೆಗಾಗಿ ವಿಸಿಎನ್‌ಆರ್ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಆರೋಗ್ಯ ಉಪಕರಣದ ತಂತ್ರಾಂಶ ಅಳವಡಿಕೆ, ಜಪಾನಿ ಶೈಲಿ ಮನೆ, ಸಂಸ್ಕೃತಿ, ಆಹಾರ, ಶಿಕ್ಷಣ ಇನ್ನಿತರ ಸೌಕರ್ಯಗಳಿರುವ ವಿಶೇಷ ಜಪಾನಿ ಸಾಂಸ್ಕೃತಿಕ ಪಾರ್ಕ್ ನಿರ್ಮಿಸುವುದು ಒಪ್ಪಂದದ ಪ್ರಮುಖ ಅಂಶಗಳಾಗಿವೆ.
ನಂತರ ತಾಲೂಕಿನ ಟಿ.ಬೇಗೂರು, ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ವಿಸಿಎನ್‌ಆರ್ ಗ್ರೂಪ್‌ಗೆ ಸೇರಿದ ಲಾಜಿಸ್ಟಿಕ್ ಪಾರ್ಕ್‌ಗೆ ತಂಡ ಭೇಟಿ ನೀಡಿತು. ಕೆಲ ದಿನಗಳ ಹಿಂದೆ ಸಿಲ್ವರ್‌ಪೀಕ್ ಗ್ಲೋಬಲ್ ಸ್‌ಟಾವೇರ್ ಕಂಪನಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ 20 ಕಂಪನಿಗಳ ಪೈಕಿ ವಿಸಿಎನ್‌ಆರ್ ಗ್ರೂಪ್ ಆಫ್ ಕಂಪನಿ, ಮೇಯರ್ ಮತ್ತವರ ತಂಡದೊಂದಿಗೆ ಸೇವಾ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿತ್ತು ಎಂದು ಕಂಪನಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರುದ್ರಮೂರ್ತಿ ಮಾಹಿತಿ ನೀಡಿದರು.

ನಾಗಸಾಕಿ ವಿಧಾನಸಭಾ ಸದಸ್ಯ ಕೈಸುಕಿ ಯಮಮೋಟೋ, ಸಿಲ್ವರ್‌ಪೀಕ್ ಗ್ಲೋಬಲ್ ಕಂಪನಿ ಸಂಸ್ಥಾಪಕ ವಿನಯ್, ನಿರ್ದೇಶಕರಾದ ಸುಭಾಬಟ್ಟಾಚನ್, ಇಸಾಕುಮೋರಿ, ತೇಜ್‌ಕುಮಾರ್, ವಿಸಿಎನ್‌ಆರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿ.ನರಸಿಂಹಮೂರ್ತಿ, ನಿರ್ದೇಶಕ ವಿ.ರಾಮಸ್ವಾಮಿ, ಗಿರೀಶ್, ರಾಮನಾಥ್, ಪವನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *