ಕೂಡ್ಲಿಗಿ: ರಾಜ್ಯದಲ್ಲಿ ಹೊಸ ಕಂದಾಯ ಗ್ರಾಮಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬುಧವಾರ ಮಾತನಾಡಿದರು, ಪೋಡಿಮುಕ್ತ, ದರಕಸ್ತು ಪೋಡಿ, ಪೋತಿ ಖಾತೆಗಳನ್ನು ಮಾಡಿಕೊಡುವುದರ ಜತೆಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರಗಳು ಇರಲಿಲ್ಲ. ಇದರಿಂದ ಜನರಿಗೆ ಸೌಲಭ್ಯಗಳು ಸಿಗದಂತಾಗಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲರಿಗೂ ಹಕ್ಕು ಪತ್ರ ನೀಡಲು ಕ್ರಮ ಕೈಗೊಂಡಿದೆ. ಸಾಧನಾ ಸಮವೇಶಕ್ಕೆ ಫಲಾನುಭವಿಗಳನ್ನು ಕರೆ ತರುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸಚಿವ ತಂಗಡಗಿ ಸೂಚನೆ ನೀಡಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಕೊಟ್ಟೂರು ತಹಸೀಲ್ದಾರ್ ಜಿ.ಅಮರೇಶ, ತಾಪಂ ಇಒ ನರಸಪ್ಪ, ಕೊಟ್ಟೂರು ತಾಪಂ ಇಒ ಪಿ.ಆನಂದ ಕುಮಾರ್, ವಿವಿಧ ಇಲಾಖೆಗಳ ಮಟ್ಟದ ತಾಲೂಕು ಅಧಿಕಾರಿಗಳು ಇದ್ದರು.