More

  ಸಾಣೂರು ಮಠದ ಕೆರೆ ಮಲಿನ

  ಬೆಳ್ಮಣ್: ಪ್ರವಾಸಿಗರನ್ನು ಆಕರ್ಷಿಸುವ ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಸಾಣೂರು ಮಠದ ಕೆರೆ ಸಮೀಪ ತ್ಯಾಜ್ಯ ಸುರಿಯುತ್ತಿದ್ದು ಇದರಿಂದ ಶುದ್ಧ ನೀರು ಮಲಿನಗೊಳ್ಳಲಾರಂಭಿಸಿದೆ. ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅತ್ಯಂತ ವಿಶಾಲ ಮತ್ತು ಪ್ರಕೃತಿ ರಮಣೀಯ ತಾಣ ಮಠದ ಕೆರೆ ಸುತ್ತಲೂ ಪ್ಲಾಸ್ಟಿಕ್ ತ್ಯಾಜ್ಯವೇ ರಾರಾಜಿಸುತ್ತಿದ್ದು ಗಾಳಿಯ ರಭಸಕ್ಕೆ ಕೆರೆಯ ಒಡಲು ಸೇರುತ್ತಿದೆ. ಕೆಲವರು ಕೆರೆ ಪಕ್ಕವೇ ತ್ಯಾಜ್ಯ ರಾಶಿ ಹಾಕುತ್ತಿದ್ದರೆ ಕಿಡಿಗೇಡಿಗಳು ನೇರವಾಗಿ ನೀರಿಗೇ ಸುರಿಯುತ್ತಿದ್ದಾರೆ. ಇದರಿಂದ ಐತಿಹಾಸಿಕ ಕೆರೆಯ ನೀರು ಮಲಿನಗೊಳ್ಳುತ್ತಿದೆ.

  ಸೂಚನಾ ಫಲಕಕ್ಕೂ ಇಲ್ಲ ಬೆಲೆ: ಮಠದ ಕೆರೆ ಸಮೀಪ ಬಸವಲಿಂಗ ದೇವರು ಹಾಗೂ ಜಲನಾಗ ಸಾನ್ನಿಧ್ಯವಿದ್ದು ಇಲ್ಲಿ ತ್ಯಾಜ್ಯ ಸುರಿಯಬಾರದು ಎಂದು ಸಾಣೂರು ಗ್ರಾಪಂ ಸೂಚನಾ ಫಲಕ ಹಾಕಿದ್ದರೂ ಪ್ರಯೋಜನವಾಗಿಲ್ಲ. ದೂರದೂರಿನಿಂದ ಬರುವ ಪ್ರವಾಸಿಗರು ನೀರಿನ ಸುಂದರ ನೋಟ ಸವಿಯಲು ಬಂದು ಅಲ್ಲೇ ಊಟೋಪಚಾರ ಮುಗಿಸಿ ಕೆರೆ ಪಕ್ಕದಲ್ಲೇ ತ್ಯಾಜ್ಯ ಸುರಿದು ಹೋಗುತ್ತಾರೆ. ಇದರಿಂದ ಕೆರೆ ಸುತ್ತಮುತ್ತ ತ್ಯಾಜ್ಯದ ರಾಶಿಯೇ ಗೋಚರಿಸುತ್ತಿದೆ. 2014-15ನೇ ಸಾಲಿನಲ್ಲಿ ತಾಲೂಕು ಪಂಚಾಯಿತಿ ಅನುದಾನದಿಂದ ಮಠದ ಕೆರೆಗೆ ಬದಿ ಕಟ್ಟಿದ್ದು ಅದೂ ಕುಸಿದು ಕೆರೆಗೆ ಬೀಳಲಾರಂಭಿಸಿದೆ.

  ಸುರಕ್ಷತಾ ಕ್ರಮ ಅಗತ್ಯ: ಕೆರೆ ಹಾಗೂ ಸುತ್ತಲೂ ತ್ಯಾಜ್ಯ ಹಾಕದಂತೆ ಸೂಕ್ತ ಕ್ರಮ ಸಾಣೂರು ಗ್ರಾಮ ಪಂಚಾಯಿತಿ ಕೈಗೊಳ್ಳಬೇಕು. ಅಪಾಯಕಾರಿ ಕೆರೆಯಲ್ಲಿ ಈಜುವುದಕ್ಕೆ ಬರುವ ಯುವಕರಿಗೆ ಎಚ್ಚರಿಕೆಯನ್ನೂ ನೀಡಬೇಕು ಎನ್ನುತಾಥರೆ ಗ್ರಾಮಸ್ಥರು. ನೀರಿನ ಮಟ್ಟ ಹೆಚ್ಚಿರುವುದರಿಂದ ಅಪಾಯಕಾರಿಯಾಗಿರುವ ಕೆರೆಯಲ್ಲಿ ಈಜುವುದು ಅಪಾಯಕಾರಿ. ಹೀಗಾಗಿ ಕೆರೆಗೆ ಇಳಿಯದಂತೆ ಎಚ್ಚರಿಕೆ ಫಲಕ ಅಳವಡಿಸಬೇಕು ಎನ್ನುವುದು ಜನರ ಅಭಿಪ್ರಾಯ.

  ಪಾಳುಬಿದ್ದ ಬೋಟಿಂಗ್ ವ್ಯವಸ್ಥೆ: ಮಠದ ಕೆರೆಯನ್ನು ಹಲವು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪ್ರಸಕ್ತ ಬೋಟಿಂಗ್ ವ್ಯವಸ್ಥೆ ಮುಂದುವರಿದಿಲ್ಲ. ಕೆರೆ ಸಮೀಪ ನಿರ್ಮಿಸಲಾದ ಶೆಡ್ಡುಗಳು ಪಾಳು ಬಿದ್ದಿವೆ. ಕೆರೆ ನಿರ್ವಹಣೆ ಕೊರತೆಯಿಂದ ಸುತ್ತಲೂ ತ್ಯಾಜ್ಯ ರಾಶಿ ಬೀಳಲಾರಂಭಿಸಿದೆ ಎನ್ನುತ್ತಾರೆ ಸ್ಥಳೀಯರು. ಮಠದ ಕೆರೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಬೋಟಿಂಗ್ ವ್ಯವಸ್ಥೆ ಮತ್ತೆ ಕಲ್ಪಿಸಿದರೆ ನಿರ್ವಹಣೆ ಸರಿಯಾಗಿ ನಡೆದು ಮತ್ತೆ ಹಿಂದಿನ ವೈಭವ ಪಡೆಯಬಹುದು. ಕೆರೆ ಸಮೀಪ ಬಿಸಾಡುವ ತ್ಯಾಜ್ಯಕ್ಕೂ ಮುಕ್ತಿ ದೊರಕುವ ಸಾಧ್ಯತೆಗಳಿದ್ದು ಕೆರೆಯೂ ಅಭಿವೃದ್ಧಿ ಕಾಣಲಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಶ್ರಮಿಸಬೇಕು ಎನ್ನುತ್ತಾರೆ ಜನ.

  ಐತಿಹಾಸಿಕ ಮಠದ ಕೆರೆಯ ಸಮೀಪ ಈ ಹಿಂದೆಯೂ ಕಸದ ರಾಶಿ ಇತ್ತು. ಅದನ್ನು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಒಟ್ಟಾಗಿ ಸೇರಿ ಶುಚಿಗೊಳಿಸುವ ಕಾರ್ಯ ಮಾಡಿದ್ದೇವೆ. ಪ್ರವಾಸಿ ವಾಹನಗಳಲ್ಲಿ ಬರುವವರು ತ್ಯಾಜ್ಯ ಸುರಿಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪರಿಸರ ಸ್ವಚ್ಛವಾಗಿಡಲು ಶ್ರಮಿಸುತ್ತೇವೆ.
  -ದಿವ್ಯಶ್ರೀ ಗಿರೀಶ್ ಅಮೀನ್, ಜಿಲ್ಲಾ ಪಂಚಾಯಿತಿ ಸದಸ್ಯೆ

  ಮಠದ ಕೆರೆ ಪ್ರವಾಸಿಗರನ್ನು ಸೆಳೆಯುವ ನೀರಿನಾಶ್ರಯ. ಕೆಲವು ಕಿಡಿಗೇಡಿಗಳು ಇದನ್ನು ತ್ಯಾಜ್ಯ ಬಿಸಾಡಲು ಬಳಸುವುದು ವಿಪರ್ಯಾಸ. ತ್ಯಾಜ್ಯ ಕೆರೆಯ ನೀರು ಸೇರುತ್ತಿದ್ದು ಜಲಚರಗಳಿಗೆ ತೊಂದರೆಯಾಗುತ್ತದೆ. ಆಡಳಿತ ಮಾಡುವವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
  -ಮಹೇಶ್ ಸಾಲ್ಯಾನ್, ಸ್ಥಳೀಯ ನಿವಾಸಿ

  ಈಗಾಗಲೇ ಹಲವು ಬಾರಿ ಕೆರೆಯ ಸುತ್ತ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ದೂರದೂರಿನಿಂದ ಬರುವವವರು ತ್ಯಾಜ್ಯ ಎಸೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
  -ರಾಜೇಶ್ವರಿ, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts