ಸಾಗರ ಎಸಿ ಕಾರು ಮುಟ್ಟುಗೋಲು

ಸಾಗರ: ರೈತರ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ಕಾರಣ ಸಾಗರದ ಹೆಚ್ಚುವರಿ ನ್ಯಾಯಾಲಯದ

ನ್ಯಾಯಾಧೀಶರು ಉಪವಿಭಾಗಾಧಿಕಾರಿಗಳ ಕಾರನ್ನು ಗುರುವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಜಲಾಶಯದ ಕೋಡಿ ಮತ್ತು ಏರಿ ಎತ್ತರಿಸುವ ಸಂಬಂಧ ಸಾಗರ ತಾಲೂಕಿನ ಆನಂದಪುರ ಹೋಬಳಿ ನಾಡವಳ್ಳಿ, ಗೌತಮಪುರ, ಭೈರಾಪುರ, ಕುಡಿಗೆರೆ ಗ್ರಾಮದ 22 ರೈತರ ಜಮೀನುಗಳನ್ನು ಹೆಚ್ಚುವರಿ ಭೂ ಸ್ವಾಧೀನಪಡಿಸಿಕೊಂಡು 13-8-2018 ಕ್ಕೆ ರೂ. 31,88,643 ಹೆಚ್ಚುವರಿ ಪರಿಹಾರ ಬಾಕಿ ಕೊಡಬೇಕಾಗಿತ್ತು. ಆದರೆ ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತ ರೈತರು ವಕೀಲರಾದ ಕೆ.ಬಿ.ಮಹಾಬಲೇಶ್ ಮೂಲಕ ಕರ್ನಾಟಕ ನೀರಾವರಿ ನಿಗಮ ನಿ. ದಂಡಾವತಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತ ಶಿಕಾರಿಪುರ ಇವರಿಗೆ ನೋಟಿಸ್ ನೀಡಿದ್ದರು. ಆದರೆ ಪ್ರಕರಣ ನನೆಗುದಿಗೆ ಬಿದ್ದಿತ್ತು. ಈ ಕುರಿತು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಿಂದ ಕೆಲವು ದಿನಗಳ ಹಿಂದೆ ಪರಿಹಾರ ನೀಡದ್ದಕ್ಕಾಗಿ ಸಮನ್ಸ್ ಜಾರಿಯಾಗಿತ್ತು. ಆದರೂ ರೈತರಿಗೆ ಸೂಕ್ತ ಭೂಸ್ವಾಧೀನ ಪರಿಹಾರ ಕೊಡಿಸುವಲ್ಲಿ ಉಪ ವಿಭಾಗಾಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಾರನ್ನು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.