ಸಾಕ್ಷಿ ಇನ್​ಬಾಕ್ಸ್​ಗೆ ಕಿಡಿಗೇಡಿ ಮೆಸೇಜ್!

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ‘ಸುವರ್ಣ ಸುಂದರಿ’ ಸಿನಿಮಾ ಮೂಲಕ ನಟಿ ಸಾಕ್ಷಿ ಚೌಧರಿ ಸ್ಯಾಂಡಲ್​ವುಡ್​ಗೆ

ಕಾಲಿಡುತ್ತಿದ್ದಾರೆ. ಮೂರು ತಲೆಮಾರಿನ ಫ್ಯಾಂಟಸಿ ಕಥೆಯನ್ನು ಹೊಂದಿರುವ ಈ ಚಿತ್ರದ ಪೋಸ್ಟರ್​ಗಳು ಈಗಾಗಲೇ ಗಮನ ಸೆಳೆದಿವೆ. ಫೆ.5ರಂದು ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿ ಸೌಂಡು ಜೋರಾಗಿದೆ. ಟಾಲಿವುಡ್​ನಲ್ಲಿ 2013ರಿಂದ ಸಕ್ರಿಯರಾಗಿರುವ ಅವರಿಗೆ ಫೋಟೋಶೂಟ್ ಕ್ರೇಜ್ ಜಾಸ್ತಿ. ಟ್ವಿಟರ್​ನಲ್ಲಿ ಆಗಾಗ ಫೋಟೋ, ವಿಡಿಯೋ ಅಪ್​ಲೋಡ್ ಮಾಡದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ ಎನಿಸುತ್ತದೆ. ಅವುಗಳಿಗೆ ಹಲವರು ಮೆಚ್ಚುಗೆ ಸೂಚಿಸಿದರೆ, ಮತ್ತೆ ಕೆಲವರು ಕುಹಕವಾಡುತ್ತಾರೆ ಎಂಬುದು ಕೂಡ ಅಷ್ಟೇ ನಿಜ.

ಕೆಲವು ಕಿಡಿಗೇಡಿಗಳಂತೂ ಅಸಭ್ಯವಾಗಿ ಕಮೆಂಟ್ ಮಾಡಿದ್ದೂ ಉಂಟು. ಅದನ್ನು ಕಂಡ ಸಾಕ್ಷಿಗೆ ತುಂಬ ಕೋಪ ಬಂದಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಅವರು ಬರೆದುಕೊಂಡಿದ್ದಾರೆ. ‘ನನ್ನ ಫೋಟೋ, ವಿಡಿಯೋ ನೋಡಿದ ಕೆಲವರಿಗೆ ಹುಚ್ಚು ಹಿಡಿದಿದೆ ಎನಿಸುತ್ತದೆ. ಅಸಭ್ಯವಾಗಿ ಮೆಸೇಜ್ ಮಾಡಿ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಅವರೆಲ್ಲ ನಿಜಕ್ಕೂ ಮೂರ್ಖರು. ನಾನು ಮಾರಾಟಕ್ಕಿಲ್ಲ. ಸುಮ್ಮನೇ ಫೋಟೋ ನೋಡಿ ಖುಷಿಪಡಿ ಅಷ್ಟೇ’ ಎಂದಿದ್ದಾರೆ ಸಾಕ್ಷಿ. ಮಾತ್ರವಲ್ಲ, ಕಿಡಿಗೇಡಿಗಳ ಕಮೆಂಟ್​ಗಳಿಗೆ ಬೆಲೆ ನೀಡದೆ ತರಹೇವಾರಿ ಫೋಟೋಗಳನ್ನು ಅಪ್​ಲೋಡ್ ಮಾಡುವ ಕಾಯಕವನ್ನು ಅವರು ಮುಂದುವರಿಸಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಸುವರ್ಣ ಸುಂದರಿ’ ಚಿತ್ರದ ಕೆಲಸಗಳು ಚಾಲ್ತಿಯಲ್ಲಿದ್ದರೆ, ತೆಲುಗಿನ ‘ಮ್ಯಾಗ್ನೆಟ್’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಇವುಗಳ ಪ್ರಚಾರದ ಸಲುವಾಗಿಯೇ ಸಾಕ್ಷಿ ಇಷ್ಟೆಲ್ಲ ಗಿಮಿಕ್ ಮಾಡುತ್ತಿದ್ದಾರೆ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ಪ್ರತಿಕ್ರಿಯಿಸುವ ಗೋಜಿಗೆ ಸಾಕ್ಷಿ ಕೈ ಹಾಕಿಲ್ಲ. -ಏಜೆನ್ಸೀಸ್