ಸಹ್ಯಾದ್ರಿ ಕಾಲೇಜಿಗೆ ಎಂಎಲ್​ಸಿ ಭೇಟಿ

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆ ವಿರೋಧಿಸಿ ಕೆಲ ದಿನಗಳ ಹಿಂದೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸೋಮವಾರ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.

ಶೌಚಗೃಹ ಕೊರತೆ, ಕೊಠಡಿಗಳ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಅಲಭ್ಯತೆ, ನೈರ್ಮಲ್ಯ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ವಿದ್ಯಾರ್ಥಿಗಳು ವಿಧಾನ ಪರಿಷತ್ ಸದಸ್ಯರ ಗಮನಸೆಳೆದರು. ಸಹ್ಯಾದ್ರಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜುಗಳಲ್ಲಿ 6 ಸಾವಿರ ವಿದ್ಯಾರ್ಥಿಗಳಿದ್ದು, 79 ಎಕರೆ ವಿಸ್ತೀರ್ಣದ ಅತಿ ದೊಡ್ಡ ಕ್ಯಾಂಪಸ್​ವುಳ್ಳ ಕಾಲೇಜಿನಲ್ಲಿ ಕೇವಲ 250 ಬೋಧಕ ಸಿಬ್ಬಂದಿ, 150 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ. ಎಚ್.ಎಸ್.ಭೋಜ್ಯಾನಾಯ್ಕ ಹಾಗೂ ಪ್ರಾಚಾರ್ಯು ಡಾ. ಶಶಿರೇಖಾ ಅವರನ್ನು ಉದ್ದೇಶಿಸಿ ಮಾತನಾಡಿದ ಆಯನೂರು ಮಂಜುನಾಥ್, ಕಾಲೇಜು ಆವರಣದಲ್ಲಿ ಕೆಲವರು ಗಾಂಜಾ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇದನ್ನು ತಪ್ಪಿಸಬೇಕು. ಕಾಲೇಜಿನ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕೆಂದರು. ಪ್ರಾಚಾರ್ಯು ಡಾ. ಶಶಿರೇಖಾ, ಪ್ರಾಚಾರ್ಯ ಡಾ. ಧನಂಜಯ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿದ್ದರು.