ಸಹಾಯಧನ ಸದುಪಯೋಗವಾಗಲಿ

ಶಿರಹಟ್ಟಿ: ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ವಿಶೇಷ ಯೋಜನೆ ಜಾರಿಗೊಳಿಸಿದ್ದು ಅದರ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿರಹಟ್ಟಿ ಸಹಯೋಗದಲ್ಲಿ ನೂತನ ಜವಳಿ ನೀತಿ ಯೋಜನೆಯಡಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸಿ, ಎಸ್ಟಿ, ಉದ್ಯಮಶೀಲತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವಿ.ಬಿ. ನಿರಾಳೆ ಮಾತನಾಡಿ, ಯಾರದೋ ಒತ್ತಾಯಕ್ಕೆ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಕಾಟಾಚಾರಕ್ಕೆ ಉದ್ದಿಮೆ ಸ್ಥಾಪಿಸಿ ನಂತರ ಸರ್ಕಾರದ ಸಹಾಯಧನ ಪಡೆದ ಬಳಿಕ ಉದ್ದಿಮೆ ಗುಳುಂ ಮಾಡುವ ಇಚ್ಛೆ ಉಳ್ಳವರಿಗೆ ಉದ್ಯಮಶೀಲತಾ ಕಾರ್ಯಾಗಾರ ನಿಷ್ಪ್ರಯೋಜಕ. ಸಬ್ಸಿಡಿಗಾಗಿ ಉದ್ಯೋಗ ಮಾಡಬಾರದು ಎಂದರು.

ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ಬಮ್ಮನಕಟ್ಟಿ ಮಾತನಾಡಿ, ಜವಳಿ ಇಲಾಖೆ ಅಧಿಕಾರಿಗಳು ಉದ್ಯಮಶೀಲರಿಗೆ ಉದ್ದಿಮೆ ಸ್ಥಾಪನೆ ಬಗ್ಗೆ ಮಾರ್ಗದರ್ಶನ, ಘಟಕದ ಖರ್ಚುವೆಚ್ಚ, ಉತ್ಪಾದನೆ ಕೌಶಲ, ಹಣಕಾಸು ವ್ಯವಸ್ಥೆ ಬಗ್ಗೆ ಆತ್ಮ ವಿಶ್ವಾಸ ತುಂಬುವುದರ ಜತೆಗೆ ಅವರು ಸಿದ್ಧಪಡಿಸಿದ ಜವಳಿ ಉತ್ಮನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಮಾರಾಟದಿಂದ ಬಂದ ಹಣ ಸಾಲದ ಮರು ಪಾವತಿ ಮಾಡಲು ಶಕ್ತರಾಗುತ್ತಾರೆ ಎಂದರು.

ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಮತ್ತು ಜಿಪಂ. ಕೃಷಿ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಮಾತನಾಡಿ, ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಗೊಳಿಸುವ ಕರ್ತವ್ಯ ಅಧಿಕಾರಿಗಳದ್ದಾಗಬೇಕು. ವಿದ್ಯಾವಂತ ನಿರುದ್ಯೋಗಿಗಳು ಸ್ವಯಂ ಇಚ್ಛಾಶಕ್ತಿಯಿಂದ ಉದ್ದಿಮೆ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡಿ ಯಶಸ್ಸು ಸಾಧಿಸುವ ಛಲ ಹೊಂದಬೇಕು ಎಂದರು.

ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಕೆ.ಎಸ್.ಎಫ್.ಸಿ. ವ್ಯವಸ್ಥಾಪಕ ಎಸ್.ಬಿ. ಬಾರಕೇರ, ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಫ್.ಬಿ. ಮ್ಯಾಟಣ್ಣವರ, ಯುವ ಮುಖಂಡ ತಿಮ್ಮರಡ್ಡಿ ಮರಡ್ಡಿ, ಕೊಟ್ರೇಶ ಸಜ್ಜನರ, ಅನುಪಮಾ ಹಿರೇಮಠ, ಶಶಿಧರ ಶಿರಸಂಗಿ, ಬಸವರಾಜ ಮುತ್ತಳ್ಳಿ, ಎಸ್.ಎಂ. ಗಡಗಿ ಮತ್ತು ಜವಳಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಉಮೇಶ ಲಮಾಣಿ ಪ್ರಾರ್ಥಿಸಿದರು. ಕೈಮಗ್ಗ, ಜವಳಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಶಿವರಾಜ ಕುಲಕರ್ಣಿ ಸ್ವಾಗತಿಸಿದರು. ಮಂಜುನಾಥ ಚೆನ್ನಪ್ಪಗೌಡ್ರ ನಿರೂಪಿಸಿದರು.

ವಿದ್ಯಾವಂತ ಯುವಕ, ಯುವತಿಯರಿಗೆ ಸರ್ಕಾರದ ನೌಕರಿ ದುರ್ಲಭದ ಮಾತಾಗಿದೆ. ಹೀಗಾಗಿ ಅವರಿಗೆ ಉದ್ಯಮಶೀಲರನ್ನಾಗಿ ಮಾಡಲು ಸರ್ಕಾರ ನೂತನ ಜವಳಿ ನೀತಿ ಯೋಜನೆ ಜಾರಿಗೊಳಿಸಿದೆ. ತಂತ್ರಜ್ಞಾನಾಧಾರಿತ ತರಬೇತಿಯೊಂದಿಗೆ ಸಣ್ಣ ಮತ್ತು ಮಧ್ಯಮ ರೀತಿಯ ಉದ್ದಿಮೆ ಸ್ಥಾಪನೆಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ. ಸ್ವಯಂ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾದಾಗ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ.
| ವಿ.ಬಿ. ನಿರಾಳೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ

Leave a Reply

Your email address will not be published. Required fields are marked *