ರಾಣೆಬೆನ್ನೂರ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಜನ ಜೀವನ ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದು, ನಗರದಾದ್ಯಂತ ಸಾರ್ವಜನಿಕರ ಓಡಾಟವೂ ಹೆಚ್ಚುತ್ತಿದೆ. ನಗರ, ಹೋಬಳಿ, ಗ್ರಾಮಗಳಲ್ಲಿ ಇಷ್ಟು ದಿನಗಳ ಕಾಲ ಮನೆಯಲ್ಲಿಯೇ ಉಳಿದಿದ್ದ ಜನರು ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ.
ನಗರದಲ್ಲಿರುವ ಹೋಟೆಲ್ (ಪಾರ್ಸಲ್ ಕೌಂಟರ್ ಮಾತ್ರ), ತರಕಾರಿ, ಬಟ್ಟೆ, ಕಿರಾಣಿ, ಬೇಕರಿ, ಚಿನ್ನಾಭರಣ, ಬುಕ್ಸ್ಟಾಲ್, ಸ್ಟೇಷನರಿ ಸೇರಿ ಇತರ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಸಮಯ ನಿಗದಿಪಡಿಸಿ ಅನುಮತಿ ನೀಡಲಾಗಿದೆ.
ಅಂಗಡಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ಕಂಡು ಬರುತ್ತಿದೆ. ಸಿಬ್ಬಂದಿ ಹಾಗೂ ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು, ಕಾರು ಮತ್ತು ಗೂಡ್ಸ್ ಆಟೋಗಳ ಸಂಚಾರ ಜೋರಾಗತೊಡಗಿದೆ. ಕಳೆದ ಒಂದೂವರೆ ತಿಂಗಳಿಂದ ಲಾಕ್ಡೌನ್ನಿಂದಾಗಿ ಸಂಪೂರ್ಣ ಸ್ತಬ್ಧವಾಗಿದ್ದ ವಾಣಿಜ್ಯ ವಹಿವಾಟುಗಳು ಈಗ ಪುನರಾರಂಭಗೊಂಡಿವೆ.
ಹಾರ್ಡ್ವೇರ್ ಅಂಗಡಿಗಳು, ಮೊಬೈಲ್, ಸೈಬರ್ ಸೆಂಟರ್ಗಳ ಬಾಗಿಲುಗಳು ತೆರೆದುಕೊಂಡಿವೆ. ಸ್ಥಗಿತವಾಗಿದ್ದ ಕಟ್ಟಡ ಕಾಮಗಾರಿಗಳು ಆರಂಭಗೊಂಡಿದ್ದು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಅಂಗಡಿಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದಿದೆ.
ಲಾಕ್ಡೌನ್ ಸಡಿಲಿಕೆ ನಿಯಮದಿಂದ ಆರಕ್ಷಕ ಸಿಬ್ಬಂದಿಗೆ ಕೊಂಚ ವಿಶ್ರಾಂತಿ ಲಭಿಸಿದಂತೆ ಕಂಡು ಬರುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ವಾಹನಗಳ ತಪಾಸಣೆ ಹಾಗೂ ಅನಗತ್ಯವಾಗಿ ಸಂಚರಿಸುತ್ತಿದ್ದ ಸವಾರರಿಗೆ ಲಾಠಿ ರುಚಿ ತೋರಿಸುವುದರಲ್ಲಿ ಹೈರಾಣಾಗಿದ್ದ ಪೊಲೀಸರು ಈಗ ನಿರಾಳವಾಗಿರುವುದು ಕಾಣಿಸುತ್ತಿದೆ.
ಇಲ್ಲಿಯ ಎಕೆಜಿ ಕಾಲನಿ, ಇಸ್ಲಾಂಪುರ ಓಣಿ, ಖತೀಬ್ಗಲ್ಲಿ ಸೇರಿ ವಿವಿಧೆಡೆ ಆಟೋರಿಕ್ಷಾ ಚಾಲಕರು ಐದಾರು ಜನರನ್ನು ಸಾಗಿಸುತ್ತಿದ್ದಾರೆ. ಮಹಿಳೆಯರು ಸಹ ಚಾಲಕನ ಸೀಟ್ನಲ್ಲಿ ಕುಳಿತು ಓಡಾಡುತ್ತಿದ್ದಾರೆ. ಬೈಕ್ ಮೇಲೆ ಮೂರ್ನಾಲ್ಕು ಜನರ ಓಡಾಟ ಸಹಜ ಎನ್ನುವಂತಹ ಸ್ಥಿತಿ ನಿಮಾರ್ಣವಾಗಿದೆ.
ಗುಟ್ಕಾಗೆ ದುಪ್ಪಟ್ಟು ಬೆಲೆ: ಲಾಕ್ಡೌನ್ ಘೊಷಣೆಯಾದಾಗಿನಿಂದ ಗುಟ್ಕಾ ಮಾರಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ. ಗುಟ್ಕಾ ಮಾರಾಟ ಬಂದ್ ಮಾಡಿಸಿದ್ದರಿಂದ ದಂಧೆಕೋರರು ಖದ್ದುಮುಚ್ಚಿ ಮಾರಾಟ ಮಾಡುತ್ತಿದ್ದು, ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. 15 ರೂ. ಬೆಲೆಯ ಆರ್ಎಂಡಿ ಒಂದು ಚೀಟ್ಅನ್ನು 50 ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ. 3ರಿಂದ 5 ರೂ. ಮಾರಾಟವಾಗುತ್ತಿದ್ದ ಸ್ಟಾರ್, ಸಿದ್ದು ಸೇರಿ ಇತರ ಗುಟ್ಕಾ ಚೀಟ್ಗಳನ್ನು 25ರಿಂದ 30 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.