ಸಹಕಾರಿ ಸಂಘದಿಂದ ರೈತರ ಅಭಿವೃದ್ಧಿ

ಶ್ರೀನಿವಾಸಪುರ: ಸಹಕಾರಿ ಸಂಘಗಳು ರೈತರ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ರೈತರಿಗಾಗಿ ನಾನಾ ಯೋಜನೆ ಹುಟ್ಟು ಹಾಕಿರುವ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ತಾಲೂಕಿನ ಕೇತಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ಸಾಲ ಪಡೆದ ಅಥವಾ ಸಹಾಯ ಪಡೆದ ಪ್ರತಿಯೊಬ್ಬರೂ ಮರುಪಾವತಿಸಿ ಸಂಘ ಉಳಿಸಿ ಬೆಳೆಸಬೇಕು ಎಂದರು.

ಕೋಚಿಮುಲ್ ನಿರ್ದೇಶಕ ಪಾಳ್ಯ ಬೈರಾರೆಡ್ಡಿ ಮಾತನಾಡಿ, ಉದ್ಯೋಗ ಸೃಷ್ಟಿಸಲು ಸಹಕಾರಿ ಕ್ಷೇತ್ರ ಬಹಳಷ್ಟು ಕ್ರಿಯಾಶೀಲವಾಗಿದೆ. ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಕೆ.ಎಂ. ನಾಗರಾಜ್ ಮಾತನಾಡಿ, ತಾಲೂಕುಮಟ್ಟದ ಸಹಕಾರ ಸಪ್ತಾಹದಲ್ಲಿ ಬೆರಳೆಣಿಕೆಯಷ್ಟು ಜನ ಭಾಗವಹಿಸಿದ್ದನ್ನು ಕಂಡು ಬೇಸರ ವ್ಯಕ್ತ ಪಡಿಸಿ, ಖಾಲಿ ಕುರ್ಚಿಗಳಿಗೆ ಸಹಕಾರಿ ತತ್ವಗಳ ಬಗ್ಗೆ ಭಾಷಣ ಮಾಡಬೇಕಾಗಿದೆ. ಸಹಕಾರಿ ಚುನಾವಣೆ ನಡೆದಾಗ ಮತ ಮಾರಾಟಕ್ಕೆ ಇಡುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಕಸಬಾ ರೇಷ್ಮೆ ಬೆಳೆಗಾರ ಸಹಕಾರ ಸಂಘದ ಉಪಾಧ್ಯಕ್ಷೆ ಸರಸ್ವತಮ್ಮ, ನಿರ್ದೇಶಕ ನಾರಾಯಣಸ್ವಾಮಿ, ಶೇಷಾಪುರ ಗೋವಿಂದಗೌಡ, ನಾಗೇಶ್​ಗೌಡ, ಒಕ್ಕೂಟದ ಸಿಇಒ ಭಾರತಿ, ಶ್ರೀನಿವಾಸಪುರ ಶಿಬಿರ ಕಚೇರಿ ವ್ಯವಸ್ಥಾಪಕ ಶಿವರಾಜ್ ಇದ್ದರು.