ಸಹಕಾರಿ ಸಂಘಗಳಿಂದಲೇ ನಾಡಿನ ಏಳಿಗೆ

< ಡಾ.ಎಂಎನ್‌ಆರ್ ರಜತ ಸಂಭ್ರಮದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ>

ಮಂಗಳೂರು: ನಿಮ್ಮೂರಲ್ಲಿರುವ ಸಹಕಾರಿ ಸಂಘಗಳು ಚಿಕ್ಕದ್ದೆಂದು ನಿರ್ಲಕ್ಷಿಸದಿರಿ. ಆ ಸಂಘಗಳನ್ನು ಸತ್ಯ, ನೀತಿ, ಪ್ರೀತಿ, ವಿಶ್ವಾಸ ಹಾಗೂ ಸಮರ್ಪಣಾ ಭಾವದಿಂದ ಬೆಳೆಸಿ. ಈ ಸಂಘಗಳೇ ನಾಡಿನ ಏಳಿಗೆಗೆ ಕಾರಣವಾಗುತ್ತವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಶನಿವಾರ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಹಾಗೂ ನವೋದಯ ಸಹಕಾರಿ ಸಂಘಗಳ ವಿಂಶತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ತತ್ವದಷ್ಟು ಒಳ್ಳೆಯ ತತ್ವ ಬೇರೆಯಿಲ್ಲ. ಸಣ್ಣ ವ್ಯಕ್ತಿಯೊಬ್ಬ ಕೂಡ ಸಹಕಾರಿ ಕ್ಷೇತ್ರದಲ್ಲಿ ಸದಸ್ಯನಾಗಿ ವ್ಯವಹಾರ ಮಾಡುವುದಕ್ಕೆ ಅವಕಾಶವಿದೆ. ಭೇದ ಭಾವ ಇಲ್ಲಿಲ್ಲ. ಅಕ್ಷರ ಜ್ಞಾನವಿಲ್ಲದಿದ್ದರೂ ವ್ಯವಹಾರ ಜ್ಞಾನದಿಂದಾಗಿ ಉತ್ತಮ ಸಾಧನೆ ಮಾಡುತ್ತಿರುವ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿದ್ದಾರೆ, ಇದು ಅತ್ಯಂತ ಅಗತ್ಯ ಎಂದರು.

ಕರಾವಳಿಯಲ್ಲಿ ಸಹಕಾರಿ ರಂಗ ಯಶಸ್ವಿಯಾದಷ್ಟು ಬೇರೆ ಜಿಲ್ಲೆಗಳಲ್ಲಿ ಆಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಒಂದು ಸಮೀಕ್ಷೆ ನಡೆಸಬೇಕು. ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿ, ಕರಾವಳಿ ಹೇಗೆ ಭಿನ್ನ ಎಂದು ತಿಳಿದುಕೊಳ್ಳುವುದಕ್ಕೆ ಇಲ್ಲಿಗೆ ಬೇರೆ ಜಿಲ್ಲೆಯಿಂದ ಸಹಕಾರಿ ರಂಗದ ಧುರೀಣರು ಬರಲಿ ಎಂದು ಹೆಗ್ಗಡೆ ನುಡಿದರು.

ಗುರುವನ್ನು ಮೀರಿಸುವ ಶಿಷ್ಯರನ್ನು ಕಂಡರೆ ನನಗೆ ಸಂತೋಷ. ಹಾಗಾಗಿಯೇ ರಾಜೇಂದ್ರ ಕುಮಾರ್ ಅವರ ಯಶಸ್ಸು, ಶ್ರೇಯಸ್ಸನ್ನು ಕಂಡು ಖುಷಿಯಾಗಿದೆ. 25 ವರ್ಷ ಹಿಂದೆ ರಾಜೇಂದ್ರ ಕುಮಾರ್ ಅಧ್ಯಕ್ಷರಾದ ಬಳಿಕ ಜಿಲ್ಲೆಯ ಎಲ್ಲ ಸೊಸೈಟಿಗಳನ್ನೂ ಬಲಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ದ.ಕ. ಮತ್ತು ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೃಷ್ಣ ಪಾಲೆಮಾರ್, ಬಿ.ನಾಗರಾಜ ಶೆಟ್ಟಿ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಶುಂಠಿಕೊಪ್ಪ ಇಬ್ರಾಹಿಂ, ಶಕುಂತಳಾ ಶೆಟ್ಟಿ, ಯು.ಆರ್.ಸಭಾಪತಿ, ಗೋಪಾಲ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕರ್ನಾಟಕ ಸಹಕಾರ ಮಹಾಮಂಡಲ ಅಧ್ಯಕ್ಷ ಎನ್.ಗಂಗಣ್ಣ, ಮೇಯರ್ ಕೆ.ಭಾಸ್ಕರ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮುಂತಾದವರು ಹಾಜರಿದ್ದರು.
ರಜತ ಸಂಭ್ರಮ ಅಭಿನಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಪತ್ರಕರ್ತರಾದ ಮನೋಹರ ಪ್ರಸಾದ್ ಮತ್ತು ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

ರಸಗೊಬ್ಬರ ಕಾರ್ಖಾನೆಗೆ ಕೈಜೋಡಿಸಿ: ರಾಜ್ಯದಲ್ಲಿ ರಸಗೊಬ್ಬರದ ತೀವ್ರ ಕೊರತೆ ಇದೆ. ಅದಕ್ಕಾಗಿ ದಾವಣಗೆರೆಯಲ್ಲಿ ಸುಸಜ್ಜಿತ ರಸಗೊಬ್ಬರ ಕಾರ್ಖಾನೆ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ 6000 ಕೋಟಿ ರೂ.ಗಳನ್ನು ವಿನಿಯೋಗಿಸಲು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮುಕ್ತ ಮನಸ್ಸು ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಈ ಕೆಲಸ ಒಮ್ಮೆಗೇ ಆಗುವಂಥದ್ದಲ್ಲ, ಸಮಯ ಬೇಕಾಗಬಹುದು, ಅನಿಲ ಸಂಪರ್ಕ, ಸೂಕ್ತ ಜಮೀನು, ಸಹಕಾರ ಮಹಾಮಂಡಲ ಮತ್ತು ಸರ್ಕಾರದ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕುವುದು ಇತ್ಯಾದಿ ಕೆಲಸ ಆಗಬೇಕಿದೆ, ಈ ಬಗ್ಗೆ ಶೀಘ್ರ ಪತ್ರ ರವಾನೆ ಮಾಡಲಾಗುವುದು ಎಂದು ತಿಳಿಸಿದರು.
ರೈತರು ನಮ್ಮ ಕಾಲಿನಲ್ಲೇ ನಿಲ್ಲಬೇಕು ಎಂಬ ಸ್ವಾಭಿಮಾನಿಗಳು, ಅಂತಹವರಿಗಾಗಿ ಖಾವಂದರು (ಡಾ.ಹೆಗ್ಗಡೆ) ಗ್ರಾಮೀಣಾಭಿವೃದ್ಧಿ ಯೋಜನೆ ಸ್ಥಾಪಿಸಿದರು. ರಾಜೇಂದ್ರ ಕುಮಾರರು ಅದೇ ಮಾದರಿಯಲ್ಲಿ ನವೋದಯ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮುಖೇನ ಕ್ರಾಂತಿ ಮಾಡಿದ್ದಾರೆ ಎಂದರು. ಎಲ್ಲೂ ರಾಜೇಂದ್ರ ಕುಮಾರ್ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ತರಲು ಹೋಗಿಲ್ಲ. ಅದುವೇ ಅವರ ಯಶಸ್ಸಿಗೆ ಕಾರಣ. ಸಾಲದ ಶೂಲದಿಂದ ಹೊರತರಬೇಕು, ಸ್ವಂತಿಕೆಯಿಂದ ಬದುಕಲು ಸಹಕಾರ ಕೊಡಬೇಕು, ಇದು ರಾಜಧರ್ಮ ಎಂದು ಹೇಳಿದರು.

ಶೂನ್ಯಬಡ್ಡಿ ದರದಲ್ಲಿ ಸಾಲ ನೀಡಿ: ಸರ್ಕಾರ ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ. ಸಾಲ ಯೋಜನೆ ರೂಪಿಸಿರುವುದು ಒಳ್ಳೆಯದು. ಇದರಲ್ಲಿ ಮೊದಲ 5 ಲಕ್ಷ ರೂ.ಗೆ ಶೂನ್ಯ ಬಡ್ಡಿದರ, ಉಳಿದ 5 ಲಕ್ಷ ರೂ.ಗೆ ಶೇ.4 ಬಡ್ಡಿದರ ಹಾಕಿದೆ. ಇದರ ಬದಲು ಎಲ್ಲ ಮೊತ್ತವನ್ನೂ ಶೂನ್ಯ ಬಡ್ಡಿ ದರದ ಸಾಲ ನೀಡಿ ನೆರವಾಗುವಂತೆ ರಾಜ್ಯ ಸಹಕಾರ ಸಚಿವರನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಒತ್ತಾಯಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನವಿದೆ. ನಮ್ಮಲ್ಲಿ ಯಾವುದೇ ರೈತ ಕಂಗೆಟ್ಟು ಆತ್ಮಹತ್ಯೆ ಮಾಡಿದ ಉದಾಹರಣೆಯಿಲ್ಲ. ಸಾಲದ ಮರುಪಾವತಿಯೂ ಶೇ.100ರಷ್ಟು ಸಮರ್ಪಕವಾಗಿ ಆಗುತ್ತಿದೆ. ರಸಗೊಬ್ಬರ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಸಿದ್ಧವಾಗಿದೆ. ಇದಕ್ಕೆ 300 ಎಕರೆ ಜಾಗ ಬೇಕಿದ್ದು, 15 ದಿನದೊಳಗೆ ರಾಜ್ಯ ಮುಖ್ಯಮಂತ್ರಿಯವರು ಮಂಜೂರು ಮಾಡುವ ನಿರೀಕ್ಷೆ ಇದೆ. ಇಲ್ಲವಾದರೆ ಸಹಕಾರ ಮಹಾಮಂಡಲದವರ ಸಕ್ಕರೆ ಕಾರ್ಖಾನೆಯ ಜಾಗವೂ ಲಭ್ಯವಿದೆ ಎಂದರು.

ಸಹಕಾರಿ ಅಭಿವೃದ್ಧಿಯಾಗಬೇಕು: ಸಮಗ್ರ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಸಮಗ್ರ ಬೆಳವಣಿಗೆಯಾಗಬೇಕಿದ್ದು, ಇದಕ್ಕೆ ಕರಾವಳಿ ಭಾಗದ ತಜ್ಞರು ರಾಜ್ಯದ ಇತರ ಭಾಗಗಳಿಗೆ ತೆರಳಿ ಸಲಹೆ ನೀಡಬೇಕು ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.
ಸರ್ಕಾರದಿಂದಲೂ ಮುಂದೆ ತೆರಳಿ ಕೆಲಸ ಮಾಡುವ ಮೂಲಕ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ರಾಜೇಂದ್ರ ಕುಮಾರ್ ಮಾದರಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ 8165 ಕೋಟಿ ರೂ. ಮೊತ್ತದ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ 74300 ಮಂದಿಯ ಒಟ್ಟು 338 ಕೋಟಿ ರೂ. ಸಾಲಮನ್ನಾ ಮಾಡಲಾಗಿದ್ದು, ಎಲ್ಲ ಮೊತ್ತವನ್ನೂ ಬಿಡುಗಡೆ ಮಾಡಲಾಗಿದೆ. 1ಲಕ್ಷ ರೂ.ವರೆಗಿನ ಒಟ್ಟು 91,858 ರೈತರ ಸಾಲಮನ್ನಾ ಮಾಡಲಾಗಿದೆ ಎಂದರು.

ಮ್ಯೂಸಿಯಂ, ಲೈಬ್ರರಿ ಉದ್ಘಾಟನೆ :ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಯ ಹಳೇ ಕಟ್ಟಡದಲ್ಲಿ ಸ್ಥಾಪಿಸಿರುವ ‘ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ’ವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಸಾಂಖ್ಯಿಕ ಮತ್ತು ಯೋಜನೆಗಳ ಜಾರಿ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ರವೀಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಿಯ ಕಲಶ: ರಜತ ಸಂಭ್ರಮದ ನೆನಪಿಗಾಗಿ ರಾಜೇಂದ್ರಕುಮಾರ್ ಅವರಿಗೆ ಪೇಟ ತೊಡಿಸಿ, 25 ಬಗೆಯ ಹೂಗಳಿಂದ ತಯಾರಿಸಿದ ಬೃಹತ್ ಹಾರ ಹಾಕಿ, ಸಹಕಾರಿ ಭೂಷಣ ಬಿರುದು ನೀಡಿ ಸನ್ಮಾನಿಸಲಾಯಿತು. ಚಿನ್ನದ ಲೇಪನದ ಬೆಳ್ಳಿಯ ಕಲಶ, ಬೆಳ್ಳಿಯ ಅಕ್ಷರದ ಸನ್ಮಾನ ಪತ್ರ ಉಡುಗೊರೆಯಾಗಿ ನೀಡಲಾಯಿತು. ಪತ್ನಿ ಅರುಣಾ ರಾಜೇಂದ್ರ ಕುಮಾರ್ ಜತೆಗಿದ್ದರು.

ಜನಸಾಗರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ನೆಹರು ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಸಂದರ್ಭ ನವೋದಯ ಸ್ವಸಹಾಯ ಸಂಘಗಳ ಮಹಿಳೆಯರು ಸಮವಸ್ತ್ರದ ಸೀರೆಯಲ್ಲಿ ಗಮನ ಸೆಳೆದರು. ನಂತರ ನಡೆದ ಸಮಾವೇಶದಲ್ಲಿ 1.50 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದರೊಂದಿಗೆ ಕರಾವಳಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಹಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರುವ ಮೂಲಕ ಹೊಸ ದಾಖಲೆ ನಿರ್ಮಾಣವಾಯಿತು. ಒಟ್ಟು ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆದದ್ದು ವಿಶೇಷವಾಗಿತ್ತು.

ನಮ್ಮ ಸಹಕಾರಿ ಕ್ಷೇತ್ರ ರಾಜಕೀಯ ಬಾಹುಗಳಿಂದ ಮುಕ್ತವಾಗಿ ನಿಂತಿದೆ. ಇಲ್ಲಿಯವರೆಗೆ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದ್ದೇನೆ. ಮುಂದೆ ಗೊತ್ತಿಲ್ಲ. ಪರಸ್ಪರ ಸಹಕಾರವೇ ಸಹಕಾರ ಕ್ಷೇತ್ರದ ಯಶಸ್ಸಿನ ಗುಟ್ಟು. ಒಳ್ಳೆಯ ಕಾರ್ಯ ಮಾಡಿದವರನ್ನು ಸಮಾಜ ಗುರುತಿಸುತ್ತದೆ ಎನ್ನುವ ಸಂದೇಶ ದೇಶಕ್ಕೆ ತಲುಪಬೇಕು ಎಂದಾದರೆ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹಿತೈಷಿಗಳು ನಿರ್ಧರಿಸಿದ್ದರು. ಅದಕ್ಕಾಗಿ ರಜತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದಾರೆ. ದೇವರು ಅರೋಗ್ಯ ನೀಡಿದಷ್ಟು ವರ್ಷ ಸಹಕಾರಿ ಕ್ಷೇತ್ರ ಹಾಗೂ ನವೋದಯ ಕುಟುಂಬದ ಏಳಿಗೆಗಾಗಿ ಕಟಿಬದ್ಧನಾಗಿರುತ್ತೇನೆ. 25 ವರ್ಷದ ಯಶಸ್ಸು ಹಾಗೂ ಸಾಧನೆಗಳನ್ನು ಬ್ಯಾಂಕಿನ ಏಳಿಗೆಗಾಗಿ ದುಡಿಯುತ್ತಿರುವ ಸಿಬ್ಬಂದಿಗೆ ಅರ್ಪಿಸುತ್ತೇನೆ.
|ಡಾ.ಎಂ.ಎನ್.ರಾಜೇಂದ್ರಕುಮಾರ್