More

  ಸಹಕಾರಿ ರಂಗದಿಂದ ಸ್ವಾವಲಂಬನೆಗೆ ಅವಕಾಶ

  ಸಿದ್ದಾಪುರ:ಪ್ರತಿಯೊಂದು ಕ್ಷೇತ್ರದಲ್ಲಿ ಸಹಕಾರ ಇದ್ದರೆ ಮಾತ್ರ ಬದುಕಲು ಸಾಧ್ಯ. ಸಹಕಾರಿ ರಂಗದಿಂದ ಸ್ವಾವಲಂಬನೆಗೆ ಅವಕಾಶವಿದೆ. ಸಹಕಾರ ಎಂಬುದು ನಮ್ಮ ಸಂಸ್ಕೃತಿ ಆಗಬೇಕಾಗಿದೆ ಎಂದು ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

  ಪಟ್ಟಣದ ಟಿಎಂಎಸ್​ನ ಅಮೃತ ಮಹೋತ್ಸವದಲ್ಲಿ ಸಂಘದ ನವೀಕೃತ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

  ಕರಾವಳಿ ಜಿಲ್ಲೆಯಲ್ಲಿ ಬೆಳೆದಂತೆ ಇನ್ನುಳಿದ ಜಿಲ್ಲೆಯಲ್ಲಿಯೂ ಸಹಕಾರಿ ಸಂಘಗಳು ಅಭಿವೃದ್ಧಿ ಆಗಬೇಕು. ಉತ್ತರ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ಸಹಕಾರಿ ರಂಗದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ನೀತಿ ಬದಲಾಗಬೇಕಾಗಿದೆ. ಕೃಷಿಗೆ ಮೂಲ ಬಂಡವಾಳ ಹಾಕಲು ರೈತರಿಗೆ ಕಷ್ಟವಾಗಿರುವುದರಿಂದ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಅಗಬೇಕು. ರಾಜ್ಯದಲ್ಲಿ 1,05,000ಕ್ಕೂ ಹೆಚ್ಚು ರೈತರ ಸಾಲ ಮನ್ನಾ ಆಗದಿರುವ ಕುರಿತು ಗಮನಕ್ಕೆ ಬಂದಿದೆ. ಸಾಲ ಮನ್ನಾ ವಿಷಯದಲ್ಲಿ ಅನೇಕ ತಾಂತ್ರಿಕ ತೊಂದರೆಗಳಾಗಿವೆ. ಅವುಗಳನ್ನು ಸರಳೀಕರಣಗೊಳಿಸುವುದಕ್ಕೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾಲಗಾರನ ಹೆಸರಲ್ಲಿ ಸರ್ವೆ ನಂಬರ್ ಇರುವ ಆರ್​ಟಿಸಿ ಇದ್ದರೆ ಅಂಥ ರೈತರ ಸಾಲ ಮನ್ನಾ ಆಗಲಿದೆ ಎಂದು ಸಾಲಮನ್ನಾದಲ್ಲಿನ ಗೊಂದಲದ ಕುರಿತು ಮಾಹಿತಿ ನೀಡಿದರು.

  ಗೃಹ ಹಾಗೂ ಸಹಕಾರ ಎರಡೂ ಇಲಾಖೆಯಲ್ಲಿ ಶಿಸ್ತು ತರಲು ಮೊದಲ ಆದ್ಯತೆ ನೀಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ನನಗೆ ಸ್ಪೂರ್ತಿ ನೀಡಿದೆ. ಇಂದು ಸ್ಪೂರ್ತಿಯ ದಿನ. ಸ್ವಾಮಿ ವಿವೇಕಾನಂದರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು.

  ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲೆಯಲ್ಲಿನ ಸಹಕಾರಿ ಸಂಘಗಳು ಯಾವುದೇ ಸ್ವಾರ್ಥ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದರಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ರಾಜ್ಯಕ್ಕೆ ಮಾದರಿಯಾದ ಸಹಕಾರಿ ಸಂಘಗಳು ಜಿಲ್ಲೆಯಲ್ಲಿವೆ. ಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವುದೇ ಸಹಕಾರಿ ಸಂಘಗಳ ಮುಖ್ಯ ಉದ್ದೇಶವಾಗಿದೆ. ಸಹಕಾರಿ ಸಂಘ ಭಾವನಾತ್ಮಕ ಸಂಬಂಧ ಹೊಂದಿರುವುದರಿಂದ ಮತ್ತಷ್ಟು ಗಟ್ಟಿಯಾಗಿವೆ. ಟಿಎಂಎಸ್ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

  ಅಮೃತ ಮಹೋತ್ಸವದ ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ಇಂದು ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆ ದೊಡ್ಮನೆ ಹಾಗೂ ಎಸ್.ಆರ್. ಬೊಮ್ಮಾಯಿ ಅವರಂಥ ನಾಯಕರ ಆದರ್ಶ ಬೇಕಿದೆ. ಈಗ ನಾಯಕತ್ವದ ಕೊರತೆ ಇಲ್ಲ. ಆದರೆ, ಆದರ್ಶ ನಾಯಕತ್ವದ ಕೊರತೆ ಇದೆ. ಸ್ವಾಮಿ ವಿವೇಕಾನಂದರ ಆದರ್ಶವನ್ನು ಯುವ ಜನತೆ ಪಾಲಿಸಬೇಕು. ವಿವೇಕಾನಂದರ ನುಡಿ ಎಲ್ಲರಿಗೂ ಸ್ಪೂರ್ತಿದಾಯಕ ಎಂದರು.

  ಶಾಸಕ ಶಿವರಾಮ ಹೆಬ್ಬಾರ, ಕ್ಯಾಂಪ್ರೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿದರು. ತುಮ್ಕೋಸ್ ಅಧ್ಯಕ್ಷ ಶಿವಕುಮಾರ, ಮ್ಯಾಮ್ಕೋಸ್ ಉಪಾಧ್ಯಕ್ಷ ಸುಬ್ರಹ್ಮಣ್ಯ ವೈ.ಎಸ್., ಕ್ಯಾಂಪ್ರೋ ನಿರ್ದೇಶಕ ಶಂಭುಲಿಂಗ ಹೆಗಡೆ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಭೀಮಣ್ಣ ನಾಯ್ಕ, ತಾ.ಪಂ. ಅಧ್ಯಕ್ಷ ಸುಧೀರ್ ಬಿ. ಗೌಡರ, ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ, ಸಂಘದ ಉಪಾಧ್ಯಕ್ಷ ಎಂ.ಜಿ. ನಾಯ್ಕ, ಸಂಘದ ವ್ಯವಸ್ಥಾಪಕ ಸತೀಶ ಹೆಗಡೆ, ಟಿಎಸ್​ಎಸ್ ವ್ಯವಸ್ಥಾಪಕ ರವೀಶ ಹೆಗಡೆ ಇತರಿರದ್ದರು.

  ಜಿ.ಜಿ. ಹೆಗಡೆ ಬಾಳಗೋಡ, ಪ್ರಸನ್ನ ಭಟ್ಟ, ರಾಜೀವ ಹೆಗಡೆ, ಗಣೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

  ಯಕ್ಷನೃತ್ಯ: ಅಭಯ ಹೆಗಡೆ ಹೊಸಗದ್ದೆ ಹಾಗೂ ವಿನಿತ್ ಕಶ್ಯಪ್ ಅವರ ಯಕ್ಷನೃತ್ಯಕ್ಕೆ ಕೇಶವ ಹೆಗಡೆ ಕೊಳಗಿ ಸಂಗಡಿಗರು ಹಿಮ್ಮೇಳ ಒದಗಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts