ಶಿರಸಿ: ರೈತರ ಸ್ವಾವಲಂಬನೆಯ ಸಂಕೇತವಾದ ಸಹಕಾರಿ ಕ್ಷೇತ್ರವನ್ನು ಬಲಗೊಳಿಸಿದ್ದು ಕಡವೆಯವರಾಗಿದ್ದಾರೆ. ಕಡವೆಯವರ ದೂರದೃಷ್ಟಿಯ ಫಲವಾಗಿ ಇಂದು ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಸಹಕಾರಿ ಕ್ಷೇತ್ರ ರೈತರ ಕೈಹಿಡಿದಿದೆ ಎಂದು ಹಿರಿಯ ಸಾಮಾಜಿಕ ಮುಖಂಡ ಎಸ್.ಕೆ. ಭಾಗವತ ಹೇಳಿದರು.
ಸಹಕಾರಿ ಧುರೀಣ ಶ್ರೀಪಾದ ಹೆಗಡೆ ಕಡವೆ ಅವರ 25ನೇ ಸಂಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋವಿಡ್ ಕಾರಣಕ್ಕೆ ಸಭೆಗೆ ಅವಕಾಶವಿಲ್ಲದ ಕಾರಣ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಹಾಗೂ ಇತರ ಗಣ್ಯರು ಕಡವೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಭಾಸ್ಕರ ಹೆಗಡೆ ಕಾಗೇರಿ, ರವೀಶ ಹೆಗಡೆ, ಶಶಾಂಕ ಹೆಗಡೆ, ಎಂ.ವಿ. ಜೋಶಿ, ದೀಪಕ ದೊಡ್ಡೂರು, ಪ್ರವೀಣ ಗೌಡ, ಸತೀಶ ನಾಯ್ಕ, ಜಗದೀಶ ಗೌಡ, ಶ್ರೀಪಾದ ಹೆಗಡೆ, ಶ್ರೀಧರ ಹೆಗಡೆ ಇತರರಿದ್ದರು.
ಪುಷ್ಪಾರ್ಚನೆ ನಂತರ ತ್ರಯಂಬಕ ಹೆಗಡೆ ಹಿತ್ಲಳ್ಳಿ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಮುಂಡಗನಮನೆಯಲ್ಲೂ ಸಂಸ್ಮರಣೆ: ತಾಲೂಕಿನ ಮುಂಡಗನಮನೆ ಸಹಕಾರಿ ಸಂಘದಲ್ಲಿ ಕಡವೆ ಸಂಸ್ಮರಣ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಕಡವೆಯವರ ಆದರ್ಶ ಪ್ರತಿಯೊಬ್ಬ ರೈತ ಸದಸ್ಯರಿಗೂ ಅನುಕರಣೀಯ. ಕಡವೆಯವರು ಶಿರಸಿಯನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಸಹಕಾರಿ ವ್ಯವಸ್ಥೆಯನ್ನು ಗ್ರಾಮೀಣಮಟ್ಟದಲ್ಲಿ ಅಭಿವೃದ್ಧಿಪಡಿಸಿ ಪ್ರಾಥಮಿಕ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಿದರು ಎಂದರು.
ಆಡಳಿತ ಸಮಿತಿ ಸದಸ್ಯರಾದ ಸುಬ್ರಾಯ ಸಿದ್ದಿ, ಸುಬ್ರಾಯ ಹೆಗಡೆ, ಮಾರುಕಟ್ಟೆ ಸಲಹೆಗಾರ ವಿ.ಆರ್.ಹೆಗಡೆ ಮತ್ತಿಘಟ್ಟ, ಮುಖ್ಯ ಕಾರ್ಯನಿರ್ವಾಹಕ ನಾಗಪತಿ ಭಟ್ಟ, ಸಹಾಯಕ ಕಾರ್ಯನಿವಾಹಕ ದತ್ತಾತ್ರೇಯ ಭಟ್ಟ ಇತರರಿದ್ದರು.