ಸಹಕಾರನಗರದಲ್ಲಿ ಸುಗ್ಗಿ ಸಂಭ್ರಮ

ಬೆಂಗಳೂರು: ಕ್ಯಾಟ್​ವಾಕ್ ಮಾಡಿದ ಗೃಹಿಣಿಯರು, ಚೆಂಡಾಟವಾಡಿದ ಹಿರಿಯರು, ಬಗೆಬಗೆಯ ತಿಂಡಿತಿನಿಸು, ಕಣ್ಣು ಹಾಯಿಸಿದಲ್ಲೆಲ್ಲ ಬಣ್ಣಬಣ್ಣದ ಚಿತ್ತಾರ..!

ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಸಹಕಾರನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಂಕ್ರಾಂತಿ ಪ್ರಯುಕ್ತ ಸಹಕಾರನಗರ ಮೈದಾನದಲ್ಲಿ ಹಮ್ಮಿಕೊಂಡಿರುವ ‘ಸುಗ್ಗಿ ಹಬ್ಬ’ದ ವಿಶೇಷತೆಗಳಿವು.

ಉತ್ಸವಕ್ಕೆ ಸಚಿವ ಕೃಷ್ಣಬೈರೇಗೌಡ ಪತ್ನಿ ಮೀನಾಕ್ಷಿ ಚಾಲನೆ ನೀಡಿದರು. ಬೆಳಗ್ಗೆಯಿಂದಲೇ ಮಳಿಗೆಗಳ ಮುಂದೆ ಜನರ ದಂಡು ಕಂಡುಬಂದಿತು. ಆಟೋಟ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವ ಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ರಂಗೋಲಿ ಸ್ಪರ್ಧೆ, ಫ್ಯಾಷನ್ ಶೋ: ಸುಗ್ಗಿ ಹಬ್ಬದ ಭಾಗವಾಗಿ ಶನಿವಾರ ಬೆಳಗ್ಗೆ ಮಹಿಳೆಯರಿ ಗಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸಿ ಗಮನಸೆಳೆದರು.

ಬಡಾವಣೆಯ ಅನೇಕ ಗೃಹಿಣಿಯರು ಫ್ಯಾಷನ್ ಶೋದಲ್ಲಿ ಮಾರ್ಜಾಲನಡಿಗೆ ಮಾಡಿದರು. ಇತ್ತೀಚಿನ ಕನ್ನಡ, ಹಿಂದಿ ಸಿನಿಮಾ ಹಾಡುಗಳಿಗೂ ಹೆಜ್ಜೆಹಾಕಿ ರಂಜಿಸಿದರು. ನಂತರ ನಡೆದ ವಿವಿಧ ಆಟೋಟಗಳಲ್ಲಿಯೂ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.

ಮಾರಾಟವೂ ಜೋರು: ಬೆಳಗ್ಗೆ ಸುಗ್ಗಿ ಹಬ್ಬ ಆರಂಭಗೊಳ್ಳುತ್ತಿದ್ದಂತೆ ಜನಸಾಗರ ಹರಿದುಬಂದಿತ್ತು. ಇದು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಮಾರಾಟಗಾರರನ್ನು ಖುಷಿಪಡಿಸಿತು. ಆರೋಗ್ಯ ಕ್ಷೇತ್ರ ಮಾಹಿತಿ, ಸೌಂದರ್ಯವರ್ಧಕ ಮತ್ತು ಅಲಂಕಾರಿಕ ವಸ್ತುಗಳ ಮಳಿಗೆ, ಪಾನೀಯಗಳು ಸೇರಿ 100ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿವೆ.

ಪಾವಬಾಜಿ, ಕಚೋರಿ, ಗೋಬಿ ಮಂಚೂರಿ, ತರಹೇವಾರಿ ಐಸ್ಕ್ರೀಂಗಳು, ಅಮೀನಗಡ ಕರದಂಟು- ಹೀಗೆ ತಿನಿಸುಪ್ರಿಯರ ಮನತಣಿಸುವ ಖಾದ್ಯಗಳಿರುವ ತಿಂಡಿ ಮೇಳಕ್ಕೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಯಿತು.

ಗಾಳಿಪಟ ಹಾರಾಟಕ್ಕೂ ಯುವಪೀಳಿಗೆಯಲ್ಲಿ ಆಸಕ್ತಿ ಹೆಚ್ಚುತ್ತಿರುವುದರಿಂದ ಗಾಳಿಪಟ ಮಾರಾಟದ ಮಳಿಗೆಗಳು ಸಹ ಮೇಳದಲ್ಲಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ

ಶನಿವಾರ ಬೆಳಗ್ಗೆ 8.45ಕ್ಕೆ ಹಬ್ಬಕ್ಕೆ ಚಾಲನೆ ನೀಡಲಾಯಿತು. 30ಕ್ಕೂ ಅಧಿಕ ಸಂಖ್ಯೆಯಲ್ಲಿ ಕುಂಭ ಹೊತ್ತ ಮಹಿಳೆಯರು ಅತಿಥಿಗಳನ್ನು ಸ್ವಾಗತಿಸಿದರು. ಸಚಿವ ಕೃಷ್ಣಬೈರೇಗೌಡರ ಪತ್ನಿ ಮೀನಾಕ್ಷಿ, ಕಾಪೋರೇಟರ್​ಗಳಾದ ಕೆ.ಎಂ. ಚೇತನ್, ಪಿ.ವಿ. ಮಂಜುನಾಥ(ಬಾಬು), ಸಹಕಾರನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ. ದೇವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *