ಹುನಗುಂದ: ಹುನಗುಂದ ಪಟ್ಟಣದ ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಇನ್ನಷ್ಟು ಈ ಕ್ಷೇತ್ರಗಳು ಪ್ರಗತಿ ಕಾಣಬೇಕಾಗಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.
ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಹುನಗುಂದ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರ ಸಂಘಟನೆ ಹೆಮ್ಮರವಾಗಿ ಬೆಳೆಯುತ್ತಿದ್ದು, ತನ್ನ ಸ್ವಂತ ಜಾಗದಲ್ಲಿ ಮಳಿಗೆ ಕಟ್ಟಿರುವ ಕಾರ್ಯ ಶ್ಲಾಘನೀಯ. ಇಂದು ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇವೆ ಮತ್ತು ಸಂಘಟನೆ ನೌಕರರ ಪ್ರಮುಖ ಧ್ಯೇಯವಾಗಿದೆ. ಸಂಘಟನೆಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದಾಗ ಮಾತ್ರ ಸಂಘಟನೆ ಸಾಧ್ಯವಾಗಲಿ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಗಣ್ಣ ಹಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರ 7ನೇ ವೇತನ ಜಾರಿಯಾಗಲು ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಮತ್ತು ಪರಿಶ್ರಮದ ಲವಾಗಿ ಸರ್ಕಾರಿ ನೌಕರರಿಗೆ ತುಟಿಭತ್ಯೆ ಹಾಗೂ 7ನೇ ವೇತನ ಆಯೋಗ ಜಾರಿಯಾಗಿದೆ. ಇದರಿಂದ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
40ಕ್ಕೂ ಹೆಚ್ಚು ಜನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. 33 ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ರಾಜವ್ವ ಬದಾಮಿ, ಖಜಾನೆ ಅಧಿಕಾರಿ ರವೀಂದ್ರ ಮಾಸ್ತಿ, ಸುಜಾತ ಹಂಚಿನಾಳ, ಎಂ.ಆರ್. ದೇಶಪಾಂಡೆ, ಬಸವರಾಜ ಗೌಡರ, ಜೆ.ಜಿ. ಗಡೇದ, ಕೆ.ಆರ್. ದೇಶಪಾಂಡೆ, ಡಿ.ಎಂ. ಬಾಗವಾನ, ಸೌಮ್ಯ ಬಾವಿಕಟ್ಟಿ, ಸಂಘದ ಖಜಾಂಚಿ ಈಶ್ವರ ಗೌಡರ, ರಾಜ್ಯ ಪರಿಷತ್ ಸದಸ್ಯ ಶಂಕರ ಮಠಪತಿ, ಉಪಾಧ್ಯಕ್ಷ ಹನುಮಂತಪ್ಪ ರಂಗಾಪುರ, ಮಹಾಂತೇಶ ನಾಡಗೌಡರ ಇತರರಿದ್ದರು. ಶಿಕ್ಷಕ ಎಸ್.ಟಿ. ರಂಗಾಪುರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹೊದ್ಲೂರ ನಿರೂಪಿಸಿದರು. ಗೌರವಾಧ್ಯಕ್ಷ ಸೋಮಶೇಖರ ವನಂಜಕರ ವಂದಿಸಿದರು.