ಸವಿಯಿರಿ ಪನೀರ್ ಸ್ಪೆಷಲ್

|ವೇದಾವತಿ ಎಚ್.ಎಸ್.

ಕಡಾಯಿ ಪನೀರ್

ಬೇಕಾಗುವ ಸಾಮಗ್ರಿ: ಕಡಾಯಿ ಮಸಾಲೆಗೆ: ದನಿಯಾ 2 ಚಮಚ, ಜೀರಿಗೆ 1 ಚಮಚ, ಕಾಳುಮೆಣಸು 1/2 ಚಮಚ, ಒಣಮೆಣಸಿನ ಕಾಯಿ 3, ಇವುಗಳನ್ನು ಎಣ್ಣೆಯನ್ನು ಹಾಕದೆ ಹುರಿದು ಪುಡಿ ಮಾಡಿಕೊಳ್ಳಿ. ನುಣ್ಣಗೆ ಬೇಡ ತರಿತರಿಯಾಗಿರಲಿ.

ಈರುಳ್ಳಿ ಟೊಮ್ಯಾಟೋ ಪೇಸ್ಟ್

ತಯಾರಿಸಲು: ಎಣ್ಣೆ 2 ಚಮಚ, ಲವಂಗ 3, ಶುಂಠಿ ಒಂದಿಂಚು, ಬೆಳ್ಳುಳ್ಳಿ ನಾಲ್ಕು ಎಸಳು, ಗೋಡಂಬಿ ಸ್ವಲ್ಪ, ಈರುಳ್ಳಿ 1, ಟೊಮ್ಯಾಟೋ 2. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಈ ಎಲ್ಲ ಪದಾರ್ಥಗಳನ್ನು ಹಾಕಿ ಹುರಿದು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬೆಣ್ಣೆ 1 ಚಮಚ, ಪಲಾವ್ ಎಲೆ ಒಂದು, ಹಸಿಮೆಣಸಿನಕಾಯಿ 1, ಕಸೂರಿ ಮೇತಿ ಅರ್ಧ ಚಮಚ, ನೀರು ಒಂದು ಕಪ್, ಪನೀರ್ 200 ಗ್ರಾಂ, ಕ್ರೀಮ್ 2 ಚಮಚ, ಕೊತ್ತಂಬರಿ ಸೊಪು್ಪ ಸ್ವಲ್ಪ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಕ್ಯೂಬ್ ರೀತಿಯಲ್ಲಿ ಕತ್ತರಿಸಿದ್ದು ಸ್ವಲ್ಪ, ಅರಿಷಿಣ ಕಾಲು ಟೀ ಚಮಚ, ಖಾರದ ಪುಡಿ ಕಾಲು ಟೀ ಚಮಚ, ರುಚಿಗೆ ತಕ್ಕಷ್ಟು ಉಪು್ಪ.

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿ. ಪಲಾವ್ ಎಲೆ, ಕಸೂರಿ ಮೇತಿ, ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಹೆಚ್ಚಿಕೊಂಡ ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಅದರೊಂದಿಗೆ ಹಾಕಿ ಬಾಡಿಸಿ. ರುಬ್ಬಿಕೊಂಡ ಪೇಸ್ಟ್ ಹಾಕಿ ಚೆನ್ನಾಗಿ ಕುದಿಸಿ. ಕಡಾಯಿ ಮಸಾಲೆ ಮಿಶ್ರಣ ಹಾಕಿ ಸೇರಿಸಿ. ಅರಿಷಿಣ, ಖಾರದ ಪುಡಿಯನ್ನು ಹಾಕಿ. ಒಂದು ಕಪ್ ನೀರನ್ನು ಹಾಕಿ ಕುದಿಸಿ. ಪನೀರನ್ನು ಬೇಕಿದ್ದರೆ ತುಪ್ಪದಲ್ಲಿ ಹುರಿದು ಹಾಕಿ ಅಥವಾ ಹಾಗೆಯೇ ಬೇಕಾದರೂ ಹಾಕಬಹುದು. ಜತೆಗೆ ಕ್ರೀಮ್ ಸೇರಿಸಿ ಮಿಶ್ರಣ ಮಾಡಿ. ಗರಂ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಐದು ನಿಮಿಷ ಮುಚ್ಚಿ ಬೇಯಿಸಿ. ರುಚಿಯಾದ ಕಡಾಯಿ ಪನೀರ್​ನ್ನು ಚಪಾತಿ, ರೋಟಿ, ನಾನ್​ನೊಂದಿಗೆ ಸವಿಯಿರಿ.

ಪನೀರ್ ಬಿರಿಯಾನಿ

ಬೇಕಾಗುವ ಸಾಮಗ್ರಿ: ಗಟ್ಟಿ ಮೊಸರು 1 ಕಪ್, ಅರಿಷಿಣ 1/2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬಿರಿಯಾನಿ ಪೌಡರ್ 3 ಚಮಚ, ಉಪು್ಪ ರುಚಿಗೆ ತಕ್ಕಷ್ಟು. ಖಾರದಪುಡಿ 3/4 ಚಮಚ, ಪನೀರ್ 200 ಗ್ರಾಂ, ಕ್ಯಾಪ್ಸಿಕಂ 1/ಕ್ಯೂಬ್ ಆಗಿ ಕತ್ತರಿಸಿ, ಈರುಳ್ಳಿ 1/ಕ್ಯೂಬ್ ಆಗಿ ಕತ್ತರಿಸಿ. ಪುದೀನ ಮತ್ತು ಕೊತ್ತಂಬರಿ ಸೊಪು್ಪ ಒಂದು ಹಿಡಿಯಷ್ಟು.

ಒಂದು ಬೌಲ್​ನಲ್ಲಿ ಮೊಸರನ್ನು ಹಾಕಿ, ಅದರಲ್ಲಿ ಮೇಲೆ ಹೇಳಿರುವ ಎಲ್ಲ ಸಾಮಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ. ಒಂದು ಗಂಟೆ ಕಾಲ ಹಾಗೆ ಇರಲಿ. ನಾಲ್ಕು ಚಮಚ ತುಪ್ಪ ಹಾಕಿ ಮೂರು ಈರುಳ್ಳಿಯನ್ನು ಹುರಿದುಕೊಳ್ಳಿ. ಈರುಳ್ಳಿಯನ್ನು ಉದ್ದುದ್ದ ಕತ್ತರಿಸಿದರೆ ಉತ್ತಮ. ನಂತರ ತುಪ್ಪದಿಂದ ಈರುಳ್ಳಿಯನ್ನು ತೆಗೆದುಕೊಳ್ಳಿ.

ಒಗ್ಗರಣೆಗೆ ಮಸಾಲೆ: ಬಿರಿಯಾನಿ ಎಲೆ 1, ಚಕ್ಕೆ ಒಂದಿಂಚು, ಕಾಳುಮೆಣಸು 10, ಏಲಕ್ಕಿ 3, ಲವಂಗ 4, ಸ್ಟಾರ್ ಅನೈಸ್ 1, ಬಾಸುಮತಿ ಅಕ್ಕಿ 1 ಕಪ್, ನೀರು 1 ಕಪ್, ಕೊತ್ತಂಬರಿ, ಪುದೀನ ಸೊಪು್ಪ ಸ್ವಲ್ಪ, ಬಿರಿಯಾನಿ ಪೌಡರ್ ಉದುರಿಸಲು. ಹಾಲಿನಲ್ಲಿ ನೆನೆಸಿದ ಕೇಸರಿ ದಳಗಳು 3 ಚಮಚ, ಉಪು್ಪ ಸ್ವಲ್ಪ ಉದುರಿಸಿ, ತುಪ್ಪ 1 ಚಮಚ.

ತಯಾರಿಸುವ ವಿಧಾನ: ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ. ಕುಕ್ಕರಿನಲ್ಲಿ ಹುರಿದ ಈರುಳ್ಳಿಯನ್ನು ತೆಗೆದ ನಂತರ ಅದೇ ತುಪ್ಪದಲ್ಲಿ ಒಗ್ಗರಣೆಗೆ ಹೇಳಿದ ಮಸಾಲೆ ಪದಾರ್ಥಗಳನ್ನು ಹಾಕಿ ಹುರಿಯಿರಿ. ಮೊಸರಿನಲ್ಲಿ ನೆನೆಸಿ ಇಟ್ಟಿರುವ ಪದಾರ್ಥಗಳನ್ನು ಸೇರಿಸಿ. ಎಲ್ಲವನ್ನೂ ಸಮತಟ್ಟಾಗಿ ಮಾಡಿ. ಅಕ್ಕಿಯಲ್ಲಿರುವ ನೀರನ್ನು ತೆಗೆದು ಮಸಾಲೆ ಪದಾರ್ಥಗಳ ಮೇಲೆ ಸಮತಟ್ಟಾಗಿ ಹರಡಿ. ಅಕ್ಕಿಯ ಮೇಲೆ ಬಿರಿಯಾನಿ ಮಸಾಲೆ, ಉಪು್ಪ ಉದುರಿಸಿ. ಕೇಸರಿ ಹಾಲನ್ನು ಸುತ್ತಲೂ ಹಾಕಿ. ಹುರಿದುಕೊಂಡ ಈರುಳ್ಳಿ, ಕೊತ್ತಂಬರಿ, ಪುದೀನ ಸೊಪ್ಪನ್ನು ಸುತ್ತಲೂ ಹರಡಿ. ಒಂದು ಚಮಚ ತುಪ್ಪ ಹಾಕಿ. ಕೊನೆಯಲ್ಲಿ ಒಂದು ಕಪ್ ನೀರನ್ನು ಕುಕ್ಕರಿನ ಕೊನೆಯ ಸುತ್ತಲೂ ಹಾಕಿ. ಮುಚ್ಚಳ ಮುಚ್ಚಿ. ಎರಡು ವಿಷಲ್ ಬಂದಾಗ ಒಲೆ ಆರಿಸಿ. ರುಚಿಯಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಬಿರಿಯಾನಿಯನ್ನು ರಾಯಿತದೊಂದಿಗೆ ಸವಿಯಿರಿ.

ಪಾಲಕ್ ಪನೀರ್

ಬೇಕಾಗುವ ಸಾಮಗ್ರಿ: ಪಾಲಕ್ ಸೊಪು್ಪ 250 ಗ್ರಾಂ, ಪನೀರ್ 200 ಗ್ರಾಂ, ಜೀರಿಗೆ 1/2 ಟೀ ಚಮಚ, ಹಸಿಮೆಣಸು 3, ಬೆಳ್ಳುಳ್ಳಿ ಎಸಳು 10-15, ಕತ್ತರಿಸಿದ ಶುಂಠಿ 1 ಇಂಚು, ಈರುಳ್ಳಿ 2, ಟೊಮ್ಯಾಟೋ 2, ಕ್ರೀಮ್ 2 ಟೇಬಲ್ ಚಮಚ, ಅರಿಷಿಣ 1/2, ಅಚ್ಚಖಾರದ ಪುಡಿ 1, ದನಿಯಾ ಪುಡಿ 1/2, ಗರಂ ಮಸಾಲೆ 1/2 ಟೀ ಚಮಚ. ಉಪು್ಪ ರುಚಿಗೆ ತಕ್ಕಷ್ಟು, ತುಪ್ಪ/ ಎಣ್ಣೆ 4 ಟೇಬಲ್ ಚಮಚ.

ತಯಾರಿಸುವ ವಿಧಾನ: ಬಾಣಲೆಯಲ್ಲಿ 2 ಲೀಟರ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿ. ನಂತರ ಸೊಪು್ಪ ಮತ್ತು ನೀರನ್ನು ಬೇರೆ ಮಾಡಿ ಆರಲು ಬಿಡಿ. ಬಾಣಲೆಯನ್ನು ಬಿಸಿ ಮಾಡಿಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಹಸಿರುಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿಯ ಬಣ್ಣ ಬದಲಾವಣೆಯಾದ ನಂತರ ಟೊಮ್ಯಾಟೋ ಹಾಕಿ ಹುರಿಯಿರಿ. ಟೊಮ್ಯಾಟೋ ಮೆತ್ತಗೆ ಬೆಂದ ನಂತರ ಆರಲು ಬಿಡಿ. ಬೇಯಿಸಿದ ಪಾಲಕ್ ಮತ್ತು ಹುರಿದ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ಬೇಯಿಸಿಕೊಂಡ ಸೊಪ್ಪಿನ ನೀರನ್ನು ಬಳಸಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಅರಿಷಿಣ, ಅಚ್ಚಖಾರದ ಪುಡಿ, ದನಿಯಾ, ಜೀರಿಗೆ ಪುಡಿಗಳನ್ನು ಹಾಕಿ ಎಲ್ಲವೂ ಒಂದಾಗುವ ರೀತಿಯಲ್ಲಿ ಮಿಶ್ರಣ ಮಾಡಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಕುದಿಸಿ. ಈ ಮಿಶ್ರಣಕ್ಕೆ ಕ್ರೀಮ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇಲ್ಲಿ ನೀವು ಗೋಡಂಬಿ ಪೇಸ್ಟ್ ಅಥವಾ ಗಟ್ಟಿಯಾದ ಮೊಸರನ್ನು ಸಹ ಬಳಸಬಹುದು. ನಂತರ ಗರಂ ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಈಗ ಪನ್ನಿರ್ ಹಾಕಿ ಎರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಅಲಂಕಾರಕ್ಕೆ ಸ್ವಲ್ಪ ಕ್ರೀಮ್ ಮತ್ತು ಪನ್ನಿರ್ ತುರಿಯನ್ನು ಹಾಕಿ ಸರ್ವ್ ಮಾಡಿ.

Leave a Reply

Your email address will not be published. Required fields are marked *