ಸವಲತ್ತು ಬಳಸಿ ಸ್ವಾವಲಂಬಿಯಾಗಿ

ಮಡಿವಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೈವೋಲ್ಟಿನ್ ರೆಷ್ಮೆ ಬೆಳೆಗೆ ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಬೆಳೆ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ ಹೇಳಿದರು.

ಮಾಲೂರು-ತೊರ್ನಹಳ್ಳಿ ರಸ್ತೆ ದಿನ್ನೂರು ಗ್ರಾಮದ ಬಳಿ ಆಲಗೊಂಡನಹಳ್ಳಿ ವೈ.ಗೋವಿಂದಪ್ಪ, ಎಸ್.ಮುರಳೀಧರ್, ಡಿ.ಆರ್.ವಿಜಯಕುಮಾರ್ ಅವರು ಪ್ರಾರಂಭಿಸಿದ ಬೈವೋಲ್ಟಿನ್ ರೇಷ್ಮೆ ಮೊಟ್ಟೆ ಉತ್ಪಾದನಾ ಘಟಕ ಹಾಗೂ ಚಾಕಿ ಹುಳು ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆದು ಸಮಯಕ್ಕೆ ಸರಿಯಾಗಿ ರೇಷ್ಮೆ ಹುಳುಗಳಿಗೆ ನೀಡಬೇಕು. ಬೈವೋಲ್ಟಿನ್ ರೇಷ್ಮೆ ಬೆಳೆ ಹಾಗೂ ಯಂತ್ರೋಪಕರಣಗಳಿಗಾಗಿ ಸರ್ಕಾರ ಹೆಚ್ಚಿನ ಸಹಾಯ ಧನ ನೀಡುತ್ತಿದೆ ಎಂದರು.

ರೈತರು ಗುಣಮಟ್ಟದ ಗೂಡು ಬೆಳೆದು ರೇಷ್ಮೆ ಬಿತ್ತನೆ ಕೋಟೆಗೆ ನೀಡಿದಾಗ ಇತರ ರೈತರಿಗೂ ಉತ್ತಮ ಇಳುವರಿ ಹಾಗೂ ಪ್ರತಿಫಲ ನೀಡುವ ರೇಷ್ಮೆ ಮೊಟ್ಟೆ ನೀಡಬಹುದು. ಈ ಭಾಗದ ರೈತರು ಕೇಂದ್ರದಲ್ಲಿ ಬೈವೋಲ್ಟಿನ್ ರೇಷ್ಮೆ ಬಿತ್ತನೆ ಪಡೆದು ಸಾಕಾಣಿಕೆ ಮಾಡುವ ಮೂಲಕ ಗುಣಮಟ್ಟದ ಬೆಳೆ ಬೆಳೆಯಬೇಕು ಎಂದರು.

ರೇಷ್ಮೆ ಇಲಾಖೆ ಆಯುಕ್ತ ಮಂಜುನಾಥ್, ಅಧಿಕಾರಿಗಳಾದ ಸುಮನಾಸಿಂಗ್, ಜಂಟಿ ನಿರ್ದೇಶಕ ಎಸ್.ಪಿ.ಕುಮಾರ್, ವಿಜ್ಞಾನಿಗಳಾದ ಮುನಿಸ್ವಾಮಿರೆಡ್ಡಿ, ಡಾ.ಶ್ರೀನಿವಾಸ್, ಉಪನಿರ್ದೇಶಕ ಎಂ.ಕೆ.ಪ್ರಭಾಕರ್ ಮಾತನಾಡಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಅಶ್ವತ್ಥನಾರಾಯಣ, ಮಂಜುನಾಥ್, ಇಲಾಖೆ ಅಧಿಕಾರಿಗಳಾದ ಬೈರೇಗೌಡ, ಎಸ್.ಮುರಳೀಧರ್, ಆಲಗೊಂಡಹಳ್ಳಿ ವೈ.ಗೋವಿಂದಪ್ಪ, ಡಿ.ಆರ್.ವಿಜಯಕುಮಾರ್ ಇದ್ದರು.

ಬೈವೋಲ್ಟಿನ್ ರೇಷ್ಮೆ ಬೆಳೆಯಲ್ಲಿ ಜಿಲ್ಲೆ ಪ್ರಥಮ: ಬೈವೋಲ್ಟಿನ್ ರೇಷ್ಮೆ ಬೆಳೆಯುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಕೋಲಾರ ಪ್ರಥಮ ಸ್ಥಾನದಲ್ಲಿದೆ. ಬೈವೋಲ್ಟಿನ್ ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ರೇಷ್ಮೆ ಬೆಳೆ ಪ್ರೋತ್ಸಾಹಿಸಲು ಪ್ರತಿವರ್ಷ 400ರಿಂದ 500 ಕೋಟಿ ರೂ. ಅನುದಾನ ನೀಡುತ್ತಿದ್ದು, ಗುಣಮಟ್ಟದ ಬೈವೋಲ್ಟಿನ್ ರೇಷ್ಮೆ ಬೆಳೆದು ಇತರ ದೇಶಗಳಿಗೂ ರಪ್ತು ಮಾಡಲಾಗುತ್ತಿದೆ ಎಂದು ಹನುಮಂತರಾಯಪ್ಪ ತಿಳಿಸಿದರು.