ಸರ್ವೋತ್ತಮ ಗುಣಗಳು

ಪೆರ್ವೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು |

ಸವೋತ್ತಮಗಳೆರಡು ಸರ್ವಕಠಿನಗಳು ||

ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು |

ಬ್ರಾಹ್ಮಿಕಾಭ್ಯಾಸವದು – ಮಂಕುತಿಮ್ಮ ||

ಭಾರತೀಯ ಸಂಸ್ಕೃ, ಶಿಕ್ಷಣ, ಧರ್ಮಗ್ರಂಥಗಳು, ಹಿರಿಯರ ಹಿತವಚನಗಳೆಲ್ಲವೂ ಸದ್ಗುಣಗಳನ್ನು ಅನುಸರಿಸುವಂತೆ ಬೋಧಿಸುತ್ತವೆ. ಉತ್ತಮ ವಿಚಾರಧಾರೆ, ಮಾನವೀಯ ಗುಣಗಳು ಪ್ರತಿಯೊಬ್ಬನಲ್ಲೂ ಇವೆ. ಆದರೆ ಅವೆಲ್ಲ ಆಂತರ್ಯಕ್ಕಿಳಿದಿರುವುದಿಲ್ಲ. ಅಂತರಂಗಕ್ಕಿಳಿದರಷ್ಟೇ ಪ್ರತಿಕೂಲ ಸಂದರ್ಭಗಳಲ್ಲೂ ಅವು ದೃಢವಾಗಿ ನೆಲೆ ನಿಲ್ಲುತ್ತವೆ. ಪ್ರಾಮಾಣಿಕತೆ, ಪರೋಪಕಾರ ಮುಂತಾದ ಗುಣಗಳೂ ಯಾವುದೋ ಪ್ರಯೋಜನವನ್ನು ಉದ್ದೇಶವಾಗಿರಿಸಿಕೊಂಡು, ಅನುಕೂಲವಿದ್ದರಷ್ಟೇ ಅನುಸರಣೆಗಿಳಿಯುವುದನ್ನು ಕಾಣುತ್ತೇವೆ. ಎಂತಹ ಸನ್ನಿವೇಶದಲ್ಲೂ ಜೀವನಮೌಲ್ಯಗಳನ್ನು ಬಿಟ್ಟುಕೊಡಲಾರೆ ಎಂಬ ನಿಲುವು ವ್ಯಕ್ತಿತ್ವವನ್ನು ಔನ್ನತ್ಯಕ್ಕೇರಿಸುತ್ತವೆ.

ಮನುಷ್ಯಜೀವಿತವನ್ನು ಉನ್ನತಗೊಳಿಸುವ ಹಲವು ಸದ್ಗುಣಗಳಲ್ಲಿ ಸರ್ವಕಾಲಕ್ಕೂ, ಸವೋತ್ತಮವಾದ ಎರಡು ಗುಣಗಳಿವೆ. ಅವು, ಮತ್ಸರರಹಿತರಾಗಿರುವುದು ಮತ್ತು ತಪ್ಪು ಮಾಡಿದವರನ್ನು ಕ್ಷಮಿಸಿ ನಡೆಯುವುದು. ಇವುಗಳನ್ನು ಜೀವನದಲ್ಲಿ ಅನುಸಂಧಾನ ಮಾಡುವುದು ಕಠಿಣವಾದರೂ ಬ್ರಹ್ಮಜ್ಞಾನವನ್ನು ಪಡೆಯುವುದಕ್ಕೆ, ದೇವನೆಡೆಗೆ ಸಾಗುವುದಕ್ಕೆ ರಹದಾರಿಯಾಗುತ್ತವೆ.

ಭಾವನಾತ್ಮಕ ಸಹಸ್ಪಂದನದಿಂದಲೇ ಬಾಂಧವ್ಯಗಳು ಉಳಿಯುತ್ತವೆ, ಬೆಳೆಯುತ್ತವೆ. ಪ್ರೀತಿ, ಮಮತೆ, ಸ್ನೇಹಗಳೆಂಬ ಹೆಸರಿನಲ್ಲಿ ಹೃದಯಕ್ಕಿಳಿವ ಸಂಬಂಧಗಳು ಕೆಲವೊಮ್ಮೆ ಬದುಕಿನ ಹಾದಿಗೆ ತೊಡಕಾಗುವುದೂ ಇದೆ. ಸಂತೋಷವನ್ನು ಇಮ್ಮಡಿಗೊಳಿಸಿ ಆತ್ಮಕ್ಕಿಳಿಯಬೇಕಾದ ಬಂಧುತ್ವವು ನೋವಿನಲ್ಲಿ ನರಳುವಂತೆ ಮಾಡುವುದು ಸುಳ್ಳಲ್ಲ. ಇತರರಲ್ಲಿ ದೋಷಗಳನ್ನು ಹುಡುಕಿ ತೆಗಳುವ, ಹಗೆ ಸಾಧಿಸುವ ಮನಃಸ್ಥಿತಿಯೂ ವ್ಯಕ್ತಿತ್ವದ ಪತನಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿರುವ ದೋಷಗಳೆಲ್ಲದಕ್ಕೂ ಸಬೂಬು ಹೇಳುವ ಮನಸ್ಸುಗಳು ಇತರರಲ್ಲಿ ದೋಷವನ್ನೇ ಹುಡುಕುತ್ತವೆ. ಅಪರಾಧವೆಸಗಿದವನಿಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡದೆ ತಿರಸ್ಕರಿಸುವ ಮನಃಸ್ಥಿತಿ ಸಾಮಾನ್ಯ. ದೋಷಿಯು ತನ್ನ ತಪ್ಪನ್ನು ಅರಿತುಕೊಂಡು ಪಶ್ಚಾತಾಪ ಪಟ್ಟಾಗ, ಆತನನ್ನು ಕ್ಷಮಿಸುವ ಮೂಲಕ ಮುಂದೆ ಎಂದೂ ಅಂತಹ ತಪ್ಪೆಸಗದಂತೆ ಆತನ ಮನಸ್ಸನ್ನು ಪರಿವರ್ತಿಸಲು ಸಾಧ್ಯ. ಆದರೆ ತಮಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಿ ನಡೆಯುವ ಔದಾರ್ಯ ಎಷ್ಟು ಜನರಲ್ಲಿದೆ?

ಲೌಕಿಕ ಬದುಕಿನಲ್ಲಿ ಮಿಳಿತನಾಗಿರುತ್ತಾ ಯಾರ ಬಗ್ಗೆಯೂ ಒಂದಿನಿತೂ ಅಸೂಯೆಪಡದೆ, ಸರ್ವರ ಹಿತವನ್ನು ಬಯಸುವ ಸಮಚಿತ್ತವು ಸಾಧನೆಯಿಂದ ಮಾತ್ರ ಸಿದ್ಧಿಯಾಗಬಲ್ಲುದು.

ಲೋಕದ ಸೃಷ್ಟಿಗೆ ಕಾರಣವಾದ ಬ್ರಹ್ಮಚೈತನ್ಯದ ಅಧೀನಕ್ಕೆ ಒಳಪಟ್ಟ ಬಾಳುವೆ ನಮ್ಮದು, ಆತನ ಆಣತಿಯಂತೆಯೇ ಇಲ್ಲಿ ಎಲ್ಲವೂ ನಡೆಯುತ್ತದೆ. ಎಲ್ಲೆಡೆ ತುಂಬಿರುವ ಭಗವದಂಶವು ಮಹಿಮಾನ್ವಿತರಲ್ಲಿ ಪ್ರಬಲವಾಗಿ ಗೋಚರಿಸುತ್ತದೆ. ಆ ದೇವರನ್ನರಿಯಲು, ಆತನನ್ನು ಸೇರಲು ಹಂಬಲಿಸುವ ವ್ಯಕ್ತಿಗೆ ಮನಃಶುದ್ಧಿಯು ಮುಖ್ಯ. ಮನಸಿನಲ್ಲಿ ಅಸೂಯೆ, ದ್ವೇಷವೆಂಬ ಕಲ್ಮಶ ತುಂಬಿಕೊಂಡರೆ ಯಾವ ಸಾಧನೆಯೂ ಸಾಧ್ಯವಿಲ್ಲ. ನೀರಿಗೆ ಬಣ್ಣದ ಪುಡಿಯನ್ನು ಸೇರಿಸಿದರೆ ಮಾತ್ರ ನೀರಿನ ಬಣ್ಣವು ಬದಲಾಗುತ್ತದೆ. ವಾಸ್ತವದಲ್ಲಿ ಶುಭ್ರವಾಗಿಯೇ ಇರುವ ಅಂತರಂಗಕ್ಕೆ ರಾಗದ್ವೇಷಗಳನ್ನು ಅಂಟಿಸಿಕೊಂಡರೆ ಬದುಕು ಕೃತಕವಾಗುತ್ತದೆ. ಹಾಗಾಗಬಾರದೆಂದರೆ ಅನುಸರಣೆಗೆ ಕಷ್ಟಸಾಧ್ಯವಾದ, ಉಳಿದೆಲ್ಲ ಗುಣಗಳಿಗಿಂತ ಶ್ರೇಷ್ಠವಾದ ನಿರ್ಮತ್ಸರತೆ ಮತ್ತು ಕ್ಷಮಾಗುಣವನ್ನು ತಪಸ್ಸಿನಂತೆ ಅಭ್ಯಸಿಸಬೇಕು. ಆಗ ದೇವನ ಸಾಮೀಪ್ಯದ ಅನುಭವವಾಗುತ್ತದೆ. ಅಂತರ್ವೀಕ್ಷಣೆಯ ಮೂಲಕ ವ್ಯಕ್ತಿಯು ತನ್ನ ಉದ್ಧಾರಕ್ಕೆ ಶ್ರಮಿಸಿದರೆ, ವಿಶ್ವಕ್ಕೆ ಮಂಗಳದಾಯಕನಾಗುತ್ತಾನೆ.