More

  ಸರ್ವರ್ ಸಮಸ್ಯೆಗೆ ಸರ್ವರ ಪರದಾಟ

  ಸಿದ್ದಾಪುರ: ಪಡಿತರ ಚೀಟಿದಾರರ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸುವುದಕ್ಕೆ ನ್ಯಾಯಬೆಲೆ ಅಂಗಡಿ ಎದುರು ದಿನಗಟ್ಟಲೆ ನಿಂತರೂ ಸರ್ವರ್ ತೊಂದರೆಯಿಂದ ಕೆಲಸವಾಗದೆ ಇರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿ ಬಂದ ದಾರಿಗೆ ಸುಂಕ ಇಲ್ಲದೇ ಮನೆಯತ್ತ ಸಾಗಿದರು.

  ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜ. 10ರೊಳಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಎಲ್ಲ ಪಡಿತರ ಚೀಟಿದಾರ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸುವಂತೆ ಸುತ್ತೋಲೆ ಹೊರಡಿಸಿರುವುದರಿಂದ ಎಲ್ಲ ನ್ಯಾಯ ಬೆಲೆ ಅಂಗಡಿ ಎದುರು ಪಡಿತರದಾರರು ಹಾಗೂ ಕುಟುಂಬದ ಸದಸ್ಯರು ಕಳೆದ ನಾಲ್ಕು ದಿನದಿಂದ ಸರತಿ ಸಾಲಿನಲ್ಲಿ ನಿಂತು ಹೋಗುವ ಸ್ಥಿತಿ ಉಂಟಾಗಿದೆ.

  ನಿತ್ಯ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಪಡಿತರ ಚೀಟಿದಾರರ ಇ-ಕೆವೈಸಿ ಮಾಡಿಸಲಾಗದೇ ಅಲ್ಲಿಯ ಸಿಬ್ಬಂದಿ ಪರದಾಡುವಂತಾಗಿದ್ದರೆ ಇತ್ತ ದಿನವಿಡೀ ನ್ಯಾಯ ಬೆಲೆ ಅಂಗಡಿ ಎದುರು ನಿಂತು ಜನತೆ ಪರಿತಪಿಸುತ್ತಿದ್ದಾರೆ.

  ಮಹಿಳೆಯರು, ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಬಳಲುತ್ತಿದ್ದವರು ನಿತ್ಯ ಏಳೆಂಟು ಕಿ.ಮೀ. ದೂರ ನಡೆದುಕೊಂಡು ನ್ಯಾಯ ಬೆಲೆ ಅಂಗಡಿ ಎದುರು ನಿಲ್ಲುವಂತಾಗಿದೆ. ಬೇರೆ ಬೇರೆ ಕಡೆ ಉದ್ಯೋಗದಲ್ಲಿರುವವರ, ವಿದ್ಯಾರ್ಥಿಗಳ ಹಾಗೂ ಕೂಲಿಕಾರರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.

  ತಾಲೂಕಿನ ಕ್ಯಾದಗಿ ಗ್ರಾ.ಪಂ. ವ್ಯಾಪ್ತಿಯ ವಂದಾನೆಯಲ್ಲಿರುವ ದೊಡ್ಮನೆ ಸೇವಾ ಸಹಕಾರಿ ಸಂಘದ ನ್ಯಾಯ ಬೆಲೆ ಅಂಗಡಿಯಲ್ಲಿ ನಾಲ್ಕು ದಿನದಿಂದ ನಿತ್ಯ 300ಕ್ಕೂ ಹೆಚ್ಚು ಜನರು ಇ-ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ಬಂದು ಹೋಗುತ್ತಿದ್ದಾರೆ. ಸರ್ವರ್ ತೊಂದರೆಯಿಂದಾಗಿ ಕೇವಲ ಐದರಿಂದ ಆರು ಜನರ ಇ-ಕೆವೈಸಿ ಮಾತ್ರ ಆಗುತ್ತಿದೆ. ಅದರಂತೆ ತಾಲೂಕಿನ ಇನ್ನುಳಿದ ನ್ಯಾಯ ಬೆಲೆ ಅಂಗಡಿಯಲ್ಲೂ ಇದೇ ಸ್ಥಿತಿ ಮುಂದುವರಿದಿದೆ.

  ನಾವು ಕೂಲಿ ಕೆಲಸ ಬಿಟ್ಟು ಶಾಲೆಗೆ ಹೋಗುವ ಮಕ್ಕಳಿಗೆ ರಜೆ ಹಾಕಿಸಿ ಮೂರು ದಿನದಿಂದ ನ್ಯಾಯ ಬೆಲೆ ಅಂಗಡಿಗೆ ಬರುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ನೀಡಿ ವ್ಯವಸ್ಥೆಯನ್ನು ಸುಧಾರಿಸಬೇಕು. | ಗೀತಾ ಮಂಜುನಾಥ ನಾಯ್ಕ ಹೊಡವತ್ತಿ

  ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಿಸಲು ಸರ್ವರ್ ಸಮಸ್ಯೆ ಇರುವುದು ನಿಜ. ಈ ಕುರಿತು ಮೇಲಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಈ ವ್ಯವಸ್ಥೆ ಮಾರ್ಚ್ 10ರವರೆಗೂ ಮುಂದುವರಿಯಲಿದೆ. ಆದ್ದರಿಂದ ಎಲ್ಲ ಪಡಿತರ ಚೀಟಿದಾರರನ್ನು ಏಕ ಕಾಲಕ್ಕೆ ಬರುವಂತೆ ಸೂಚಿಸದೆ ಒಂದು ದಿನದಲ್ಲಿ ಎಷ್ಟು ಇ-ಕೆವೈಸಿ ಮಾಡಲು ಸಾಧ್ಯವಾಗುತ್ತದೆಯೋ ಅಷ್ಟು ಪಡಿತರ ಚೀಟಿದಾರರನ್ನು ಕರೆಸಿಕೊಳ್ಳುವಂತೆ ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿ ಅವರಿಗೆ ಸೂಚನೆ ನೀಡಲಾಗಿದೆ. | ಪುಟ್ಟಸ್ವಾಮಿ ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಕಾರವಾರ

  See also  ದುಂದುವೆಚ್ಚ ಮಾಡದೇ ಜೀವನ ಸಾಗಿಸಿ: ಕೊಪ್ಪಳ ಸಂಸದ ಸಂಗಣ್ಣ ಕರಡಿ ಕಿವಿಮಾತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts