ಸರ್ವರಂಗದಲ್ಲೂ ಮಹಿಳೆ ದಾಪುಗಾಲು

ಹಂಸಭಾವಿ: ಬದುಕು ದೀಪವಿದ್ದ ಹಾಗೆ. ದೀಪಕ್ಕೆ ಬೆಲೆ ಕಟ್ಟಬಹುದು ಆದರೆ, ಬೆಳಕಿಗೆ ಕಟ್ಟಲು ಸಾಧ್ಯವಿಲ್ಲ. ದೀಪದ ಮಹತ್ವ ಗೊತ್ತಾಗುವುದು ಕತ್ತಲಾದಾಗ ಮಾತ್ರ ಎಂದು ಲಿಂಗನಾಯಹಳ್ಳಿ ಚನ್ನವೀರ ಶ್ರೀಗಳು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಶಿವಯೋಗಾಶ್ರಮದಲ್ಲಿ ನಡೆದ ಮಾಸಿಕ ಚಿಂತನ ಗೋಷ್ಠಿ, ವಿಶ್ವ ಮಹಿಳಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಜಿ.ಅರ್. ಕೆಂಚಕ್ಕನವರ, ‘ಬಸವಾದಿ ಪ್ರಮಥರ ಜೀವನದ ಫಲವಾಗಿ ಸ್ತ್ರೀಯರು ಇಂದು ಸರ್ವರಂಗದಲ್ಲಿ ಪುರುಷ ಸಮಾನ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

ಅತಿಥಿ ಲೀಲಾವತಿ ಪಾಟೀಲ ಮಾತನಾಡಿ, ‘ಮಹಿಳೆ ಅಬಲೆಯಲ್ಲ, ಹೆಣ್ಣನ್ನು ಕೀಳಾಗಿ ಕಾಣದೇ ಗೌರವ ಭಾವನೆ ಹೊಂದಬೇಕು’ ಎಂದರು.

ದತ್ತಿ ದಾನಿಗಳಾದ ಡಾ. ಗಣೇಶ ತೊಗರ್ಸಿ, ಎಸ್.ವಿ. ಪಾಟೀಲ, ನಿರ್ಮಲಾ ಅಕ್ಕಿ, ಸುಲೋಚನಾ ಕೆರೂಡಿ ಉಪಸ್ಥಿತರಿದ್ದರು. ಕದಳಿ ವೇದಿಕೆ ಹಂಸಭಾವಿ ಘಟಕ ಅಧ್ಯಕ್ಷೆ ಶಾಂಭವೀತಾಯಿ ಕೆರೂಡಿ ಅವರನ್ನು ಸನ್ಮಾನಿಲಾಯಿತು. ಶಸಾಪ ಹಂಸಭಾವಿ ಘಟಕಾಧ್ಯಕ್ಷ ಪ್ರಾಚಾರ್ಯ ಡಾ. ಎಂ.ಎಂ. ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಶೀಲಾ ಕೋಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಅಕ್ಕಿ ಸ್ವಾಗತಿಸಿದರು. ನೂತನ ನಿರ್ವಹಿಸಿದರು.