ಸರ್ವಧರ್ಮ ಗೌರವಿಸುವವ ವಿಶ್ವಮಾನವ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಧರ್ಮವು ಒಂದು ನಡಾವಳಿಯೆ ಹೊರತು ಅದು ನಂಬಿಕೆಯಲ್ಲ. ಪರಸ್ಪರ ಧರ್ಮಗಳನ್ನು ದ್ವೇಷಿಸದೆ ಪ್ರೀತಿ, ಸಹೋದರತೆಯಿಂದ ಸರ್ವಧರ್ಮಗಳನ್ನು ಗೌರವಿಸುವ ವ್ಯಕ್ತಿಯೆ ವಿಶ್ವಮಾನವನಾಗಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರಭು ಖಾನಾಪುರೆ ಅಭಿಪ್ರಾಯಪಟ್ಟರು.

ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆ ಜಂಟಿಯಾಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ನಿಮಿತ್ತ ಶನಿವಾರ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಜಾತಿ ವ್ಯವಸ್ಥೆ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ತಮ್ಮ ಲೇಖನಿ ಮೂಲಕ ವಿರೋಧಿಸಿದ ರಾಷ್ಟಕವಿ ಕುವೆಂಪು ಅವರು ಶೂದ್ರ ವರ್ಗದ ಕವಿಯಾಗಿ ಹೊರಹೊಮ್ಮಿದ್ದರು ಎಂದರು.

ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಧರ್ಮ-ಜಾತಿಗಿಂತಲು ಮಾನವ ಧರ್ಮ ದೊಡ್ಡದು ಎಂದು ವಿಶ್ವ ಮಾನವ ಸಂದೇಶ ನೀಡಿರುವ ಯುಗದ ಕವಿ ಕುವೆಂಪು ಅವರ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ಸಾಗೋಣ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ವಿಶ್ವಮಾನವ ಕುವೆಂಪು ಕಿರುಹೊತ್ತಿಗೆ ಗಣ್ಯರು ಬಿಡುಗಡೆ ಮಾಡಿದರು. ಕಿರುಹೊತ್ತಿಗೆಯನ್ನು ನೆರೆದಿದ್ದ ಸಭಿಕರಿಗೆ ವಿತರಿಸಲಾಯಿತು.

ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಸಾಹಿತಿಗಳಾದ ಭೀಮಣ್ಣ ಬೋನಾಳ, ವಾಸುದೇವ ಸೇಡಂ, ಚಿ.ಸಿ.ನಿಂಗಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಠಾಚಾರ ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಆಹಾರ ಇಲಾಖೆ ಉಪನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ ಇತರರು ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸ್ವಾಗತಿಸಿದರು. ಸುರೇಶ ಬಡಿಗೇರ ನಿರೂಪಣೆ ಮಾಡಿದರು. ನಂತರ ಕುವೆಂಪು ರಚನೆಯ ಗೀತೆಗಳಿಗೆ ವಿದ್ಯಾರ್ಥಿನಿಯರಿಂದ ಜರುಗಿದ ಸಮೂಹ ನೃತ್ಯ ರೂಪಕವು ಸಭಿಕರನ್ನು ರಂಜಿಸಿತು.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಆದರೆ ಪ್ರತಿಭೆಗಳಿಗೆ ಸೂಕ್ತ ಚೈತನ್ಯ ತುಂಬುವಲ್ಲಿ ಎಲ್ಲೋ ಎಡುವುತ್ತಿದ್ದೇವೆ. ಪ್ರಯತ್ನಶೀಲದ ಕೊರತೆ ಮತ್ತು ಮೈಗಳ್ಳತನ ಮತ್ತಷ್ಟು ಹಿಂದುಳಿಕೆಗೆ ಕಾರಣವಾಗಿದ್ದು, ಇದರಿಂದ ನಾವು ಹೊರಬಂದು ಸಾಧನೆಯ ಶಿಖರ ಏರಬೇಕು.

| ಡಾ.ಸ್ವಾಮಿರಾವ ಕುಲಕರ್ಣಿ ಸಾಹಿತಿ, ಕಲಬುರಗಿ