ಸರ್ವಜ್ಞ ಸಾರ್ವಕಾಲಿಕ

ಚಿಕ್ಕಬಳ್ಳಾಪುರ: ಸರ್ವಜ್ಞರ ವಚನಗಳ ಅಧ್ಯಯನವು ಉತ್ತಮ ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಮಹಾಕವಿ ಸರ್ವಜ್ಞ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ವಜ್ಞ ವಚನ ಕ್ರಾಂತಿಯ ಮೂಲಕ ಸಮಾನತೆ ಸಾರಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಯುವ ಜನತೆ ಹೆಚ್ಚಿಗೆ ಸರ್ವಜ್ಞ ವಚನಗಳನ್ನು ಓದಬೇಕು. ಹಾಗೆಯೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಎಂ.ಎನ್.ರಘು ಮಾತನಾಡಿ, ಸರ್ವಜ್ಞರು ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಸಿಕ್ಕ ಅಮೂಲ್ಯ ಕೊಡುಗೆ. ಇವುಗಳ ಸಂದೇಶವು ಸರ್ವಕಾಲಿಕವಾದುದು. ಪ್ರಸ್ತುತ 7070 ತ್ರಿಪದಿ ವಚನಗಳ ಪೈಕಿ 1 ಸಾವಿರ ತ್ರಿಪದಿಗಳು ಮಾತ್ರ ಸಿಕ್ಕಿವೆ. ಇವು ಹಲವು ಭಾಷೆಗಳಿಗೆ ಭಾಷಾಂತರಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರ್ವಜ್ಞರ ಕೆಲ ವಚನಗಳನ್ನು ಹೇಳಿ, ಅರ್ಥವನ್ನು ತಿಳಿಸಲಾಯಿತು. ನಗರಸಭೆ ಅಧ್ಯಕ್ಷ ಎಂ. ಮುನಿಕೃಷ್ಣ, ಪೌರಾಯುಕ್ತ ಉಮಾಕಾಂತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವೀಕ್ಷಕ ಆಂಜಿನಪ್ಪ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಉಪ ನಿರ್ದೇಶಕ ಬಿ.ಎಸ್. ವೆಂಕಟಾಚಲಪತಿ ಮತ್ತಿತರರು ಇದ್ದರು.