ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕ

ಕೋಲಾರ: ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕ ಸತ್ಯವಾಗಿದ್ದು, ಸಮಾಜದ ಅಭಿವೃದ್ಧಿಗಾಗಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಲ್. ಗಾಯತ್ರಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಕವಿ ಮಹಾಜ್ಞಾನಿ. ಹಾವೇರಿ ಜಿಲ್ಲೆಯಲ್ಲಿ ಜನಿಸಿದವರು. ಕನ್ನಡ ನಾಡಿನ ಆಸ್ತಿ. ಸರ್ವಜ್ಞರ ತ್ರಿಪದಿಗಳು ಸರಳತೆಯಿಂದ ಜನಪ್ರಿಯವಾಗಿವೆ. ಇಂತಹ ಮಹಾಜ್ಞಾನಿಯ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಸಕಲವನ್ನೂ ಬಲ್ಲವರಾಗಿದ್ದ ಸರ್ವಜ್ಞ ತ್ರಿಪದಿಗಳಲ್ಲಿ ಕಟ್ಟಿಕೊಟ್ಟ ಸಂದೇಶಗಳು ದೊಡ್ಡ ಕಾವ್ಯಗಳಿಗಿಂತಲೂ ಹೆಚ್ಚು ಅರ್ಥಗರ್ಭಿತವಾಗಿದ್ದವು. ಸರ್ವಜ್ಞರ ಜಯಂತಿ ಆಚರಿಸುವ ಮೂಲಕ ಕುಂಬಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಮಾತನಾಡಿ, ಜಾತಿ, ಸಮುದಾಯ, ರಾಜಕೀಯವನ್ನು ವ್ಯಾಪಾರಿ ಧರ್ಮದಲ್ಲಿ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ಜಯಂತಿಗಳಿಗೆ ರಂಗಮಂದಿರದಲ್ಲಿ ಜನ ತುಂಬಿದ್ದಾರೆಂದರೆ 10 ನಿಮಿಷದಲ್ಲಿ ಓಡಿ ಬರುತ್ತಾರೆ. ಜನ ಸುಮಾರಾಗಿದ್ದರೆ ಸಂದೇಶ ಕಳುಹಿಸಿ ಸುಮ್ಮನಾಗುತ್ತಾರೆ ಎಂದು ಶಾಸಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿದ ಬಂಗಾರಪೇಟೆ ಶಿಕ್ಷಕ ಎಲ್.ರಾಜಪ್ಪ, ಯಾವುದೇ ಆಸರೆಯಿಲ್ಲದ ಸಮುದಾಯಕ್ಕೆ ತ್ರಿಪದಿಗಳ ಮೂಲಕ ಬೆಳಕು ನೀಡಿದ ಮಹಾನ್ ವ್ಯಕ್ತಿ ಕವಿ ಸರ್ವಜ್ಞ. ಕನ್ನಡವನ್ನು ವಿಶ್ವದ ಉತ್ತುಂಗಕ್ಕೆ ಏರಿಸಿದ ಕಣ್ಮಣಿ. ತಂದೆ, ತಾಯಿ ಮತ್ತು ಗುರುವಿನ ಸಾಮರ್ಥ್ಯವನ್ನು 16ನೇ ಶತಮಾನದಲ್ಲೇ ತಿಳಿಸಿಕೊಟ್ಟಿದ್ದರು. ಉತ್ತಮ ನಾಗರಿಕತೆ ತಿಳಿಸಿಕೊಟ್ಟ ಸಮಾಜ ನಮ್ಮದಾಗಿದ್ದರೂ ಸೌಲಭ್ಯಗಳಿಂದ ವಂಚಿತವಾಗಿದೆ. ಇನ್ನಾದರೂ ಎಲ್ಲ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಲು ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದರು.

ಮಾಲೂರು ಪುರಸಭೆ ಸದಸ್ಯ ಲಕ್ಷ್ಮೀನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕಲ್ಲಂಡೂರು ಶ್ರೀನಿವಾಸಪ್ಪ, ಪದಾಧಿಕಾರಿಗಳಾದ ಡಾ.ಕೆ.ನಾಗರಾಜ್, ಕೆ.ವಿ.ಶ್ರೀನಿವಾಸ್, ಮಂಜುನಾಥ್, ನಂಜುಂಡಪ್ಪ, ನಂದೀಶ್, ವೇಣು ಉಪಸ್ಥಿತರಿದ್ದರು.

ಜಿಲ್ಲೆಯ ಯಾವ ಶಾಸಕರಿಗೂ ಬಿಡುವಿಲ್ಲ: ಜಿಲ್ಲೆಯಲ್ಲಿ ಕುಂಬಾರ ಸಮಾಜ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಏನೂ ಮಾಡಲ್ಲ ಎಂಬ ಕಾರಣಕ್ಕೆ ರಾಜಕೀಯದವರು, ಅಧಿಕಾರಿಗಳು ಸರ್ವಜ್ಞ ಜಯಂತಿ ಕಡೆಗಣಿಸಿದ್ದಾರೆ. ನಮ್ಮ ಬೇಡಿಕೆಗಳ ಮನವಿ ಸಲ್ಲಿಸಬೇಕೆಂದು ಕಾತುರದಿಂದ ಕಾಯುತ್ತಿದ್ದೆವು. ಜಿಲ್ಲೆಯ 6 ಶಾಸಕರಿಗೂ ಬಿಡುವಿಲ್ಲ. ಜಿಲ್ಲಾಧಿಕಾರಿಗಳಿಗೂ ಬಿಡುವಿಲ್ಲ, ಯಾರಿಗೆ ಮನವಿ ನೀಡಬೇಕು? ಈ ನಿರ್ಲಕ್ಷ್ಯಕ್ಕೆ ನಮ್ಮನ್ನು ಕರೆಯುವ ಅಗತ್ಯವಿರಲಿಲ್ಲ. ಅವರೇ ಮಾಡಿಕೊಳ್ಳಬೇಕಿತ್ತು ಎಂದು ಕುಂಬಾರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಮತಯಾಚನೆಗೆ ಬರುತ್ತಾರಷ್ಟೆ: ಕುಂಬಾರ ನಿಗಮ ಮಂಡಳಿ ರಚನೆಯಾದ ಬಳಿಕ ಅಧ್ಯಕ್ಷರ ನೇಮಕಕ್ಕೆ ನೂರಾರು ಬಾರಿ ಅಂದಿನ ಸಿಎಂ ಯಡಿಯೂರಪ್ಪ ಬಳಿ ಓಡಾಡಬೇಕಾಯಿತು. ಅಧ್ಯಕ್ಷರಾದವರಿಗೆ ಕಚೇರಿ, ಕುರ್ಚಿ ಇರಲಿಲ್ಲ. ಇಷ್ಟು ಕಡೆಗಣನೆಗೆ ನಮ್ಮತನವೇ ಕಾರಣ. ನಮ್ಮನ್ನು ಚುನಾವಣೆಗೆ ಮಾತ್ರ ಜನಪ್ರತಿನಿಧಿಗಳು ಬಳಸಿಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಮತಯಾಚನೆಗೆ ಬಂದಾಗ ತಕ್ಕಪಾಠ ಕಲಿಸೋಣ ಎಂದು ಮುಖಂಡರು ತಿಳಿಸಿದರು.