ಸರ್ಕಾರ ಹೆಚ್ಚಿನ ಪರಿಹಾರ ನೀಡಲಿ

ಬಣಕಲ್: ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳನ್ನು ಶನಿವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪರಿಶೀಲನೆ ನಡೆಸಿದರು. ಕಸ್ಕೆಬೈಲು, ಗೋಣಿಬೀಡು, ಬಿದರಹಳ್ಳಿ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಡನೆ ಮಾತುಕತೆ ನಡೆಸಿದರು. ನಂತರ ಮಾತನಾಡಿ, ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಹಲವು ಮನೆಗಳನ್ನು ಕಳೆದುಕೊಂಡಿದ್ದಾರೆ. ಕಾಫಿ ತೋಟಗಳು ಕೊಚ್ಚಿ ಹೋಗಿವೆ. ಅತಿವೃಷ್ಟಿಯಿಂದ ನೆಲ ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

ನಂತರ ಬಂಕೇನಹಳ್ಳಿಯ ಸಂಪರ್ಕ ಕಡಿತಗೊಂಡ ಹೇಮಾವತಿ ನದಿ ಸೇತುವೆ ರಸ್ತೆ ವೀಕ್ಷಿಸಿ, ಕೊಟ್ಟಿಗೆಹಾರದ ಏಕಲವ್ಯ ಶಾಲೆಯ ಪರಿಹಾರ ಕೇಂದ್ರಕ್ಕೆ ಹೋಗುವಾಗ ಕೊಟ್ಟಿಗೆಹಾರದಲ್ಲಿ ಚನ್ನಡ್ಲು, ಹರವಿನಕೆರೆ ಗ್ರಾಮಕ್ಕೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರಿಂದ ಹಳ್ಳಿಕೆರೆ, ಚನ್ನಡ್ಲು, ಮಲೆಮನೆ, ಜಾವಳಿ ಗ್ರಾಮದ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು.

ಮಾಜಿ ಸಭಾಪತಿ ಬಿ.ಎಲ್ ಶಂಕರ್, ಶಾಸಕ ಟಿ.ಡಿ.ರಾಜೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಮಾಜಿ ಸಚಿವೆ ಮೋಟಮ್ಮ, ಎಐಸಿಸಿ ಕಾರ್ಯದರ್ಶಿ ಸಂದೀಪ್ ಬಿ.ಎಲ್., ಬಾಳೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಂದ್ರ, ಮುಖಂಡರಾದ ಮುಸಫರ್, ಹೇಮಶೇಖರ್. ಕೃಷ್ಣೇಗೌಡ, ಸುರೇಂದ್ರ, ಕೆ.ಆರ್.ಮಹೇಶ್, ಮನು, ಸವಿತಾ ರಮೇಶ್, ಅನಂತು, ಹೊಸ್ಕೆರೆ ರಮೇಶ್, ಸಿಲ್ವರ್​ಸ್ಟರ್, ರೂಬಿನ್ ಮೋಸಸ್, ಶಿವಾನಂದ್ ಸ್ವಾಮಿ, ಅಂಶುಮನ್, ಸಬ್ಲಿ ದೇವರಾಜ್, ವಿನಯ್ಕುಮಾರ್, ಎಂ.ಪಿ.ಮನು ಇದ್ದರು.

ಕೇಂದ್ರದ ಅನುದಾನ ತರುವಲ್ಲಿ ವಿಫಲ
ಮೂಡಿಗೆರೆ: ರಾಜ್ಯದಲ್ಲಿ ಬಿಜೆಪಿಯ 25 ಸಂಸದರು, ಕೇಂದ್ರ ಸಚಿವರಿದ್ದರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು. ಗೋಣಿಬೀಡು ಸಮೀಪದ ಕಸ್ಕೇಬೈಲ್ ಗ್ರಾಮದಲ್ಲಿ ನಾಶವಾದ 30 ಎಕರೆ ಕಾಫಿ ತೋಟದ ಸ್ಥಿತಿ ವೀಕ್ಷಿಸಿದ ನಂತರ ಗೊಣಿಬೀಡು ನೆರೆ ಪರಿಹಾರದ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವಾಹದಿಂದ ರಾಜ್ಯದ 20 ಜಿಲ್ಲೆಯಲ್ಲಿ 60 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಬಳಿ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ನೀಡುವಂತೆ ಬೇಡಿಕೊಂಡರೂ ನಯಾ ಪೈಸೆ ಕೊಡುತ್ತಿಲ್ಲ. ಜನತೆ ಸಂಕಷ್ಟದಲ್ಲಿರುವಾಗ ರಾಜಕೀಯ ಮಾಡದೆ ಪರಿಹಾರ ಒದಗಿಸುವುದು ಕೇಂದ್ರ, ರಾಜ್ಯ ಸರ್ಕಾರದ ಹೊಣೆ ಎಂದು ಹೇಳಿದರು.

Leave a Reply

Your email address will not be published. Required fields are marked *