ಸರ್ಕಾರ ಸಮ್ಮತಿಸದೆ ಬಜೆಟ್ ಜಾರಿ ಅಸಾಧ್ಯ ಎಂದು ಬಿಬಿಎಂಪಿ ಸಭೆಯಲ್ಲಿ ಆಯುಕ್ತರ ಸ್ಪಷ್ಟನೆ: ಬಜೆಟ್ ತಡೆಹಿಡಿದಿದ್ದಕ್ಕೆ ಆಡಳಿತ- ಪ್ರತಿಪಕ್ಷ ಜಟಾಪಟಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡದೆ ಬಿಬಿಎಂಪಿ ಬಜೆಟ್ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಬಜೆಟ್ ತಡೆ ಹಿಡಿದಿರುವ ಕುರಿತಂತೆ ಸೋಮವಾರ ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಪ್ರಶ್ನೆಗೆ ಆಯುಕ್ತರು ಸ್ಪಷ್ಟನೆ ನೀಡಿದರು.

ಬಜೆಟ್ ಸಿದ್ಧಪಡಿಸುವುದಕ್ಕೂ ಮುನ್ನ ಬಿಬಿಎಂಪಿ ಆಯುಕ್ತರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಕರಡು ಬಜೆಟ್ ಸಿದ್ಧಪಡಿಸಿ ನೀಡುತ್ತಾರೆ. ಅದನ್ನಾಧರಿಸಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬಜೆಟ್ ರೂಪಿಸುತ್ತದೆ. ಅದರಂತೆ ಈ ಬಾರಿ 13 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ರೂಪಿಸಲಾಗಿತ್ತು. ಅದನ್ನು ಸರ್ಕಾರಕ್ಕೆ ಕಳುಹಿಸುವ ಸಂದರ್ಭದಲ್ಲಿ, ಬಜೆಟ್ ಗಾತ್ರದ ಬಗ್ಗೆ ವಿವರಣೆ ನೀಡಲಾಗಿತ್ತು ಎಂದರು.

ಬಿಬಿಎಂಪಿ ಸಾಲ, ಚಾಲ್ತಿ, ಪೂರ್ಣಗೊಂಡಿರುವ ಕಾಮಗಾರಿಗಳ ವಿವರಗಳನ್ನೊಳಗೊಂಡ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರಲ್ಲಿ ಬಜೆಟ್ ಗಾತ್ರ 9 ಸಾವಿರ ಕೋಟಿ ರೂ. ದಾಟದಂತಿರಲಿ ಎಂದು ಸೂಚಿಸಲಾಗಿತ್ತು. ಬಜೆಟ್ ಅನ್ನು ನಗರಾಭಿವೃದ್ಧಿ ಇಲಾಖೆ ಅದನ್ನು ಪರಿಶೀಲಿಸಿ ಹಣಕಾಸು ಇಲಾಖೆಗೆ ಕಳುಹಿಸಿತ್ತು. ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಬಜೆಟ್ ಗಾತ್ರ 9 ಸಾವಿರ ಕೋಟಿ ರೂ. ದಾಟಬಾರದೆಂದು ಹಣಕಾಸು ಇಲಾಖೆ ಸೂಚಿಸಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ 11,648 ಕೋಟಿ ರೂ.ಗೆ ಅನುಮೋದನೆ ನೀಡಿದೆ.

ಟ್ರಾನ್ಸಾಕ್ಷನ್ ಬಿಜಿನೆಸ್ ರೂಲ್ಸ್ ಪ್ರಕಾರ ಹಣಕಾಸು ಇಲಾಖೆಯ ಶಿಫಾರಸನ್ನು ಸಚಿವ ಸಂಪುಟ ಹೊರತುಪಡಿಸಿ ಇನ್ನೊಂದು ಇಲಾಖೆ ಕಡೆಗಣಿಸಲು ಸಾಧ್ಯವಿಲ್ಲ. ಆದರೂ, ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಬಜೆಟ್ ಅನುಷ್ಠಾನಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿತ್ತು. ಬಜೆಟ್​ಗೆ ಸಚಿವ ಸಂಪುಟ ಅನುಮೋದನೆ ಕಡ್ಡಾಯ. ಈಗ ಸರ್ಕಾರ ಅನುಮೋದನೆ ನೀಡಲು ಮುಂದಾಗಿದೆ. ಅದನ್ನು ಹೊರತುಪಡಿಸಿದರೆ ಬಿಬಿಎಂಪಿಯಿಂದ ಯಾವುದೇ ತಪ್ಪಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ದ್ವೇಷದ ರಾಜಕಾರಣ: ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಬೆಂಗಳೂರು ಅಭಿವೃದ್ಧಿಯಾಗಬೇಕೆಂದು ಮಂಡಿಸಲಾದ ಬಜೆಟ್​ಗೆ ತಡೆ ನೀಡಿದೆ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದರು. ಬಜೆಟ್​ಗೆ ತಡೆ ನೀಡಿದ್ದರಿಂದಾಗಿ ತ್ಯಾಜ್ಯ ನಿರ್ವಹಣೆಗೆ ಗುತ್ತಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳ ಅನುಷ್ಠಾನ, ಇಂದಿರಾ ಕ್ಯಾಂಟೀನ್ ನಿರ್ವಹಣೆ, ಸಿಬ್ಬಂದಿಗೆ ವೇತನ ಹಾಗೂ ಗಣೇಶ ಹಬ್ಬಕ್ಕೆ ತಯಾರಿ ನಡೆಸಲು ಹಣವಿಲ್ಲದಂತಾಗಿದೆ. ಕೂಡಲೇ ಬಜೆಟ್​ಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿಯಲ್ಲಿ 2008-13ರವರೆಗೆ ಬಿಜೆಪಿ ಆಡಳಿತದಲ್ಲಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಆಗಲೂ ಬಜೆಟ್ ಗಾತ್ರ ಪಾಲಿಕೆ ಆದಾಯ ಕ್ಕಿಂತ ಹೆಚ್ಚಾಗಿತ್ತು. ಆಗೆಲ್ಲ ಆಕ್ಷೇಪ ವ್ಯಕ್ತವಾಗಲಿಲ್ಲ. ಹೀಗೆ ಬಜೆಟ್ ಗಾತ್ರ ಏರಿಕೆ ಮಾಡಿದ್ದರಿಂದಲೇ 11 ಆಸ್ತಿಗಳನ್ನು ಅಡಮಾನವಿಟ್ಟು 3 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಬಂದ ನಂತರ ಅಡವಿಟ್ಟ ಕಟ್ಟಡಗಳನ್ನು ಬಿಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಶಿವರಾಜು ಹೇಳಿದರು.

ಅನುದಾನ ಪಡೆದವರು ನಿಮ್ಮಲ್ಲಿದ್ದಾರೆ

ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆರೋಪಿಸಿದರು. ಕಾಂಗ್ರೆಸ್ ಶಾಸಕರು, ಸದಸ್ಯರಿಗೆ ಕೋಟಿಗಳ ಲೆಕ್ಕದಲ್ಲಿ ಅನುದಾನ ಕೊಟ್ಟು, ಬಿಜೆಪಿ ಶಾಸಕರು ಮತ್ತು ಸದಸ್ಯರಿಗೆ ಲಕ್ಷದ ಲೆಕ್ಕದಲ್ಲಿ ಅನುದಾನ ಕೊಡಲಾಗಿದೆ. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಹಾಗೂ ಮುಂದೆ ಬಿಬಿಎಂಪಿಯಲ್ಲೂ ನಾವು ಅಧಿಕಾರಕ್ಕೆ ಬರಬಹುದು. ನಾವು ನಿಮ್ಮ ಹಾಗೆ ಅನುದಾನಕ್ಕೆ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ಸಮಾನವಾಗಿ ಅನುದಾನ ನೀಡುತ್ತೇವೆ ಎಂದು ಆಡಳಿತ ಪಕ್ಷದ ಸದಸ್ಯರನ್ನು ಕಿಚಾಯಿಸಿದರು.ಆಗ ಕಾಂಗ್ರೆಸ್ ಸದಸ್ಯೆ ಹಾಗೂ ಮಾಜಿ ಮೇಯರ್ ಪದ್ಮಾವತಿ ಮಧ್ಯಪ್ರವೇಶಿಸಿ, ಅತಿಹೆಚ್ಚು ಅನುದಾನ ತೆಗೆದುಕೊಂಡವರೆಲ್ಲ ನಿಮ್ಮ ಬಳಿಯೇ ಬಂದಿದ್ದಾರೆ. ಇಲ್ಲಿ ಅನುದಾನ ಪಡೆದು ಅಲ್ಲಿಗೆ ಶಿಫ್ಟ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

ನಿಮ್ಮ ಅವಧಿಯ ಭ್ರಷ್ಟಾಚಾರ ಗೊತ್ತಿದೆ

ಅನುದಾನ ತಾರತಮ್ಯ ಸೇರಿ ಇನ್ನಿತರ ವಿಷಯಗಳ ಕುರಿತು ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷದವರು ಆರೋಪಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಮಾಜಿ ಮೇಯರ್ ಪದ್ಮಾವತಿ, ನಿಮ್ಮ ಅವಧಿಯಲ್ಲಿ ಕಲರ್ ಇಂಕ್ ಬಳಸಿ ಚೆಕ್​ಗಳಿಗೆ ಸಹಿ ಹಾಕಿ ಹಣ ಬಿಡಿಸಿಕೊಂಡಿದ್ದು ಗೊತ್ತಿದೆ. ಅದೇ ರೀತಿ ಮ್ಯಾಜಿಕ್ ಬಾಕ್ಸ್ ನಿರ್ವಣ, ರಾತ್ರೋ ರಾತ್ರಿ ಟೆಂಡರ್ ಆಹ್ವಾನಿಸಿ ಲೂಟಿ ಮಾಡಿದಿರಿ. ಈಗ ನಮಗೆ ಬುದ್ಧಿವಾದ ಹೇಳಲು ಬರುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಮೈತ್ರಿ ಪಕ್ಷಗಳ ವಿರುದ್ಧ ಬಿಜೆಪಿ ಆರೋಪ

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಚನ ಭ್ರಷ್ಟ ಆಡಳಿತ ನಡೆಸಿವೆ. ರಾಜ್ಯ ಸರ್ಕಾರ ಕಳೆದ ನಾಲ್ಕೈದು ವರ್ಷಗಳಲ್ಲಿ 20 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ಘೋಷಿಸಿತ್ತು. ಆದರೆ, ಅದರಲ್ಲಿ ಶೇ. 50 ಅನುದಾನವನ್ನು ನೀಡಿಲ್ಲ. ಇನ್ನೂ 10 ಸಾವಿರ ಕೋಟಿ ರೂ. ಅನುದಾನ ಬರಬೇಕಿದೆ. ಹಾಗೆಯೇ, ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವುದು ತಾಂತ್ರಿಕ ಕಾರಣಗಳಿಂದ. ಸಚಿವ ಸಂಪುಟ ಅನುಮೋದನೆ ಪಡೆಯದೆ ಬಜೆಟ್ ಅನುಷ್ಠಾನ ಸಾಧ್ಯವಿಲ್ಲ. ಹೀಗಾಗಿ ಬಜೆಟ್​ಗೆ ತಡೆ ನೀಡಲಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಬಜೆಟ್​ಗೆ ಅನುಮೋದನೆ ನೀಡಲಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಮಾಜಿ ಮೇಯರ್ ಮಂಜುನಾಥರೆಡ್ಡಿ, ವಚನ ಭ್ರಷ್ಟ ಎಂಬ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಕಡತದಿಂದ ತೆಗೆದು ಹಾಕುವಂತೆ ಮೇಯರ್​ರಲ್ಲಿ ಆಗ್ರಹಿಸಿದರು. ಅದಕ್ಕೆ ಆ ಪದವನ್ನು ಕಡತದಿಂದ ತೆಗೆಯುವಂತೆ ಮೇಯರ್ ಗಂಗಾಂಬಿಕೆ ಸೂಚಿಸಿದರು.

ಬಜೆಟ್ ಅನುಮೋದಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಪಾಲಿಕೆ ಬಜೆಟ್​ಗೆ ಅನುಮೋದನೆ ನೀಡದೆ ರಾಜಕೀಯ ಮಾಡಲಾಗುತ್ತಿದೆ. ಬೆಂಗಳೂರಿನ ಜನರು ಬಿಜೆಪಿಯ ನಾಲ್ವರು ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನೀಡಿದ ಕೊಡುಗೆಯಿದು ಎಂದು ಶಿವರಾಜು ವ್ಯಂಗ್ಯವಾಡಿದರು. ಇನ್ನೊಂದು ವಾರದಲ್ಲಿ ಬಜೆಟ್​ಗೆ ಸರ್ಕಾರ ಅನುಮೋದನೆ ನೀಡಿದ್ದರೆ ಕಾಂಗ್ರೆಸ್​ನ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ದುರಂತ ನಾಯಕ ಅಯೋಗ್ಯ ಮೇಯರ್

ಬಜೆಟ್ ಅನುಮೋದನೆ ಕುರಿತಂತೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಜಿ ಮೇಯರ್ ಮಂಜುನಾಥರೆಡ್ಡಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರನ್ನು ವಿರೋಧ ಪಕ್ಷದ ದುರಂತ ನಾಯಕ ಎಂದು ಜರಿದರು. ಬಿಜೆಪಿ ಸದಸ್ಯರನ್ನು ಕತ್ತಲಲ್ಲಿಟ್ಟು ಅವರಿಗೆ ನಾಯಕರಾಗಿದ್ದೀರಿ. ಅದನ್ನು ಗಮನಿಸಿದರೆ, ನೀವು ದುರಂತ ನಾಯಕ ಎಂದು ಹೇಳಿದರು.

ಅದರಿಂದ ಸಿಟ್ಟಿಗೆದ್ದ ಪದ್ಮನಾಭರೆಡ್ಡಿ, ನೀವು ಅಯೋಗ್ಯ ಮೇಯರ್. ನಿಮ್ಮ ಆಡಳಿತದಲ್ಲಿ ಬಿಬಿಎಂಪಿ ಎಲ್ಲ ರೀತಿಯಲ್ಲೂ ಹಿನ್ನಡೆ ಸಾಧಿಸಿತು ಎಂದು ಪ್ರತ್ಯುತ್ತರ ನೀಡಿದರು.

ಗಣೇಶ ವಿಸರ್ಜನೆಗೂ ಅಡ್ಡಿ

ಸರ್ಕಾರ ಬಜೆಟ್​ಗೆ ತಡೆ ಹಿಡಿದಿರುವುದರಿಂದ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ, ಸಂಚಾರಿ ಟ್ಯಾಂಕರ್​ಗಳಲ್ಲಿ ವಿಸರ್ಜನೆ ಮಾಡದಂತಹ ಸ್ಥಿತಿ ನಿಮಾಣವಾಗಿದೆ ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದರು.

ನಗರದ ಅಭಿವೃದ್ಧಿ ವಿಷಯವಾಗಿ ಸರ್ಕಾರ ಆದ್ಯತೆ ನೀಡಬೇಕಾಗಿತ್ತು. ಈ ಬಗ್ಗೆ ಅನುಮಾನ ಇದ್ದಲ್ಲಿ ಕೆಲ ವಿಷಯಗಳಿಗೆ ಅನುಮತಿ ನೀಡಿ ಯಾವುದು ಅನುಮಾನವಿದೆಯೋ ಅಂತಹ ಕಾರ್ಯಗಳಿಗೆ ತಡೆ ನೀಡಬಹುದಾಗಿತ್ತು. ಟೆಂಡರ್, ಕಾಮಗಾರಿಗಳಿಗೆ ತಡೆ ನೀಡಿರುವುದರಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಕೊಳಗಳಲ್ಲಿ ಗಣೇಶಮೂರ್ತಿಗಳ ವಿಸರ್ಜನೆಗೆ ಅಗತ್ಯ ಕ್ರಮ ಕೈಗೊಳ್ಳದಂತಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *