More

  ಸರ್ಕಾರ ತಪ್ಪೆಸಗಿದಾಗ ಕಿವಿಹಿಂಡಿ -ಸಚಿವ ಮಲ್ಲಿಕಾರ್ಜುನ್ ಹೇಳಿಕೆ -ಭಗವಾನ್ ವಿಶ್ವಕರ್ಮ ಜಯಂತ್ಯುತ್ಸವ

  ದಾವಣಗೆರೆ: ರಾಜ್ಯದಲ್ಲಿ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಸೌಲಭ್ಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

  ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವಾನ್ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
  ವಿರೋಧ ಪಕ್ಷಗಳು ಹಾಗೂ ಶ್ರೀಮಂತರು ಗ್ಯಾರಂಟಿ ಯೋಜನೆ ಬೇಕಾಗಿರಲಿಲ್ಲ ಎಂದು ಟೀಕಿಸುತ್ತಿದ್ದಾರೆ. ಆದರೆ, ಜನರಿಗೆ ಏನು ಬೇಕು ಎಂಬುದನ್ನು ಪ್ರಾಯೋಗಿಕವಾಗಿ ಮನಗಂಡಿದ್ದೇವೆ. ಅನ್ನ, ಶಿಕ್ಷಣ, ಸೂರು ಹಾಗೂ ಆರೋಗ್ಯ ಸೌಲಭ್ಯ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
  ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ 10 ಕೆ.ಜಿ. ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರ ಉಚಿತ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಕಾರ್ಯಗತಗೊಂಡಿದ್ದು, ಗೃಹಲಕ್ಷ್ಮಿ ದೇಶದಲ್ಲೇ ಒಂದು ಮಾದರಿ ಯೋಜನೆ. ಜಿಲ್ಲೆಯಲ್ಲಿ 3.40 ಲಕ್ಷಕ್ಕೂ ಅಧಿಕ ಮಹಿಳೆಯರು ಇದರ ಸೌಲಭ್ಯ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯೂ ಜಾರಿಗೆ ಬರಲಿದೆ ಎಂದರು.
  ಜನತೆ ಒಳ್ಳೆಯ ಆಡಳಿತಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದು ಬರೀ ಹೊಗಳುಭಟ್ಟರಾಗದೆ ತಪ್ಪು ಮಾಡಿದಾಗ ಕಿವಿಹಿಂಡುವ ಮೂಲಕ ಸರ್ಕಾರವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಬೇಕು. ಲೋಕಸಭೆ ಚುನಾವಣೆಯಲ್ಲೂ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿಶ್ವಕರ್ಮ ಜಯಂತಿ ಪ್ರಾರಂಭಿಸಿತು. ವಿಶ್ವಕರ್ಮ ಸಮಾಜವು ಒಗ್ಗಟ್ಟಿನಿಂದ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ಎಲ್ಲ ಸಮಾಜಗಳಿಗೂ ಕಡಿಮೆ ದರದಲ್ಲಿ ನಿವೇಶನ ಒದಗಿಸಿದ್ದು ವಿಶ್ವಕರ್ಮ ಸಮಾಜಕ್ಕೂ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
  ಖಾನಾ ಹೊಸಹಳ್ಳಿಯ ಡಾ. ವೃಷಭೇಂದ್ರಾಚಾರ್ ಅರ್ಕಸಾಲಿ ಮಾತನಾಡಿ, ಶಿಕ್ಷಣ, ಸಂಘಟನೆ ಹಾಗೂ ಹೋರಾಟದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ವಿಶ್ವಕರ್ಮ ಸಮಾಜವು ಕೇವಲ ಕುಲಕಸುಬುಗಳಿಗೆ ಮಾತ್ರ ಅಂಟಿಕೊಂಡಿದೆ. ಶಿಕ್ಷಣದ ಮೂಲಕ ಉನ್ನತ ಹುದ್ದೆ ಪಡೆದುಕೊಳ್ಳಬೇಕು. ಸಿನಿಮಾ, ಸಂಗೀತ, ಕ್ರೀಡೆ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ತಿಳಿಸಿದರು.
  ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾನಂದ ಮಾತನಾಡಿ, ಸಮಾಜದಲ್ಲಿ ಮನೆ ನಿರ್ಮಾಣದಿಂದ ಮಂಗಳಕಾರ್ಯದವರೆಗೂ ಯಾವುದೇ ಕೆಲಸಗಳಿಗೆ ವಿಶ್ವಕರ್ಮ ಸಮಾಜದವರು ಬೇಕು. ತಮ್ಮ ವೃತ್ತಿಯ ಜತೆಗೆ ಸಾಮಾಜಿಕ ಹಾಗೂ ರಾಜಕೀಯ ಅಭಿವೃದ್ಧಿ ಸಾಧಿಸಬೇಕು ಎಂದು ಎಂದರು.
  ವಿಶ್ವಕರ್ಮ ಸಮಾಜದ ಭಾಸ್ಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್, ಗೌರವಾಧ್ಯಕ್ಷ ಪೂರ್ವಾಚಾರ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts