ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ತುಮಕೂರು: ಅಂಗವಿಕಲರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಸರ್ಕಾರ ಮೀಸಲಾತಿ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಅಂಗವಿಕಲರು ಸರ್ಕಾರಿ ಸೌಲಭ್ಯ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು ಎಂದು ಜಿಪಂ ಅಧ್ಯಕ್ಷೆ ಲತಾ ಹೇಳಿದರು.

ನಗರದ ಬಾಲಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಿಗೆ ಅನುಕಂಪಕ್ಕೆ ಬದಲಾಗಿ ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕಿದೆ. 3 ವರ್ಷದಿಂದ ಜಿಪಂನಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿದ್ದ ಸುಮಾರು 80 ಲಕ್ಷ ರೂ. ಸ್ವಯಂ ಉದ್ಯೋಗ, ವ್ಯಾಪಾರ, ಕುರಿ ಸಾಕಾಣಿಕೆ, ತ್ರಿಚಕ್ರ ವಾಹನಗಳಿಗೆ ವೆಚ್ಚ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ನಿಗದಿತ ಅನುದಾನವನ್ನು ಅಂಗವಿಕಲರ ವಿವಿಧ ಸೌಲಭ್ಯಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಂಗವಿಕಲರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸ್ವಾವಲಂಬಿಯಾಗಿ ಬದುಕಬೇಕು. ಸರ್ಕಾರ ಅಂಗವಿಕಲರಿಗೆ ಹಲವು ಯೋಜನೆಗಳಡಿ ಆರ್ಥಿಕ ನೆರವು ಒದಗಿಸುತ್ತಿದ್ದು, ಅರ್ಹ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಜಿಲ್ಲಾ ಕಾನೂನು ಮತ್ತು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿ, ಸರ್ಕಾರವು ಅಂಗವಿಕಲರಿಗೆ ಉನ್ನತ ಹುದ್ದೆಯಲ್ಲಿ ಶೇ.4 ಹಾಗೂ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.5 ಮೀಸಲಾತಿ ಕಲ್ಪಿಸಿದೆ ಎಂದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಶಾರದಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ.ರಮೇಶ್ ಮತ್ತಿತರರಿದ್ದರು.

ಅಂಗವೈಕಲ್ಯ ಮನಸ್ಸಿಗಲ್ಲ ಎಂಬುದನ್ನು ಅರಿತು ಆತ್ಮವಿಶ್ವಾಸದಿಂದ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವತ್ತ ಮನಸ್ಸು ಮಾಡಬೇಕು. ತಾಯಂದಿರು ಗರ್ಭಾವಸ್ಥೆಯಲ್ಲಿ ಮುಂಜಾಗ್ರತೆ ವಹಿಸುವುದರಿಂದ ಅಂಗವೈಕಲ್ಯ ತಡೆಗಟ್ಟಬಹುದು.

| ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ