ಸರ್ಕಾರಿ ಶಾಲೆ ಮಕ್ಕಳು ಭತ್ತ ಬೆಳೆದರು!

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲ್ಕುತ್ರಿಯಲ್ಲಿ ತಾವೇ ನಾಟಿ ಮಾಡಿದ ಭತ್ತವನ್ನು ಕೊಯ್ಲು ಮಾಡಿ, ಹೊರೆ ಕಟ್ಟಿ, ಹುಲ್ಲಿನಿಂದ ಭತ್ತ ಬೇರ್ಪಡಿಸಿ ಕೃಷಿ ಕುರಿತು ಸಮಗ್ರ ಅಧ್ಯಯನ ನಡೆಸಿದರು.

ಪಠ್ಯದಲ್ಲಿ ಕೃಷಿಗೆ ಸಂಬಂಧಿಸಿದ ವಿಷಯನ್ನು ಪ್ರಾಯೋಗಿಕವಾಗಿ ತಂದು ಕೃಷಿಕರ ಶ್ರಮಜೀವನ ಹೇಗಿರುತ್ತದೆ ಎಂದು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.

ಆಗಸ್ಟ್ 27ರಂದು 4ರಿಂದ 7ನೇ ತರಗತಿಯ ವಿದ್ಯಾರ್ಥಿಗಳು 12 ಗುಂಟೆ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ್ದರು. ನಂತರ ಪ್ರತಿ 15-20 ದಿನಕ್ಕೊಮ್ಮೆ ಗದ್ದೆಗೆ ಭೇಟಿ ನೀಡಿ ಅದರ ಬೆಳವಣಿಗೆ ಪರಿಶೀಲಿಸುತ್ತಿದ್ದರು. ಡಿ. 24ರಂದು ವಿದ್ಯಾರ್ಥಿಗಳೆಲ್ಲ ಸೇರಿ ಎರಡೂವರೆ ತಾಸಿನಲ್ಲಿ ಭತ್ತ ಕಟಾವು ಮಾಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಕಟಾವು ಮಾಡಿಟ್ಟ ಭತ್ತವನ್ನು ಜ. 1ರಂದು ಹೊರೆ ಕಟ್ಟಿ ಹೊತ್ತು ತಂದು ಹುಲ್ಲಿನಿಂದ ಭತ್ತವನ್ನು ಬೇರ್ಪಡಿಸುವಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.

ಹೊರೆ ಕಟ್ಟುವ ಮಾಹಿತಿ: ಕಟಾವು ಮಾಡಿಟ್ಟ ಭತ್ತದ ಹುಲ್ಲನ್ನು ಹೊರೆ ಕಟ್ಟುವ, ಹಗ್ಗ ಬಿಗಿಯುವ ಹಾಗೂ ಮೆದೆ ತೆಗೆಯುವ ವಿಧಾನವನ್ನು ಗದ್ದೆಯ ಮಾಲೀಕ ಕೆರಿಯಾ ಗಣಪ ಗೌಡ, ಕನ್ನ ಗೌಡ, ಎಸ್​ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಎಂ.ಗೌಡ ಹಾಗೂ ಊರಿನ ಕೃಷಿಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದರಂತೆ ವಿದ್ಯಾರ್ಥಿಗಳು ಸಣ್ಣ ಸಣ್ಣ ಹೊರೆ ಕಟ್ಟಿ ಕಣಕ್ಕೆ ಹೊತ್ತು ತಂದು ಹುಲ್ಲಿನಿಂದ ಭತ್ತ ಬೇರ್ಪಡಿಸಿ ಮೆಚ್ಚುಗೆ ಗಳಿಸಿದರು.

ಈ ಸಂದರ್ಭದಲ್ಲಿ ಸೋವಿನಕೊಪ್ಪ ಗ್ರಾಪಂ ಸದಸ್ಯೆ ಸುಶೀಲಾ ವೆಂಕಟೇಶ ಗೌಡ, ಎಸ್​ಡಿಎಂಸಿ ಉಪಾಧ್ಯಕ್ಷೆ ರಾಧಾ ವೆಂಕಟ್ರಮಣ ಗೌಡ, ಹಳೇ ವಿದ್ಯಾರ್ಥಿಗಳ ಸಂಘದವರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಮುಖ್ಯವಾಗಿ ಕೃಷಿಯ ಮಹತ್ವ ತಿಳಿದುಕೊಂಡು ಯಶಸ್ವಿಗಾಗಿ ಪೂರೈಸಿದ್ದಾರೆ ಎಂದು ಮುಖ್ಯಗುರು ದರ್ಶನ ಹರಿಕಾಂತ ಮೆಚ್ಚುಗೆ ವ್ಯಕ್ತಪಡಿಸಿದರು.