ಬೇಲೂರು: ಚಿಕ್ಕಮೇದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಭಾನುವಾರ ಬೆಳಗ್ಗೆ ವಿವಿಧ ಗ್ರಾಮಗಳಿಗೆ ತೆರಳಿ ಪಾಲಕರಿಗೆ ಅರಿವು ಮೂಡಿಸಿ ಹಲವು ಮಕ್ಕಳ ದಾಖಲಾತಿ ಮಾಡಿಕೊಂಡರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಕ್ಕಳು ಉತ್ತಮ ಶಿಕ್ಷಣಕ್ಕಾಗಿ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವುದು ಕಾಣುತಿದ್ದೇವೆ. ಆದರೆ ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿರುವ ಬಗ್ಗೆ ಗ್ರಾಮೀಣ ಭಾಗದಲ್ಲಿ ಪಾಲಕರಿಗೆ ಮನವರಿಕೆ ಮಾಡಿಕೊಟ್ಟು ಅವರ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲಿಸುವಂತೆ ಚಿಕ್ಕಮೇದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಹಮತ್ ಉಲ್ಲಾ ಅರಿವು ಮೂಡಿಸಿದರು.
ಚಿಕ್ಕಮೇದೂರು ಅಕ್ಕಪಕ್ಕದ ಮರೂರು ಹಾಗೂ ಬೆಣ್ಣಿನ ಮನೆ ಗ್ರಾಮಗಳ ಮನೆ ಮನೆಗೂ ತೆರಳಿ ಭಿತ್ತಿಪತ್ರಗಳನ್ನು ಹಂಚಿ ಪಾಲಕರಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವರ ಮನವೊಲಿಸಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಎಲ್‌ಕೆಜಿ ಮತ್ತು ಯುಕೆಜಿ ಹಾಗೂ 1ರಿಂದ 7ನೇ ತರಗತಿಗಾಗಿ ಹಲವಾರು ಮಕ್ಕಳನ್ನು ದಾಖಲು ಮಾಡಿಕೊಂಡಿದ್ದಾರೆ.
ರಹಮತ್ ಉಲ್ಲಾ ಮಾತನಾಡಿ, ಗ್ರಾಮೀಣ ಬಡ ಹಾಗೂ ಸಾಮಾನ್ಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಶಾಲೆಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ಮಕ್ಕಳ ಅನುಕೂಲಕ್ಕಾಗಿ ಉಚಿತ ಶಿಕ್ಷಣ, ಚಿತ್ರಕಲೆ, ಕಂಪ್ಯೂಟರ್, ಸ್ಕೌಟ್ಸ್ ಗೈಡ್ಸ್, ಶಿಶುಸ್ನೇಹಿ ವಾತಾವರಣ, ಶಿಶು ಕೇಂದ್ರ ಮೌಲ್ಯ ಶಿಕ್ಷಣ, ಯೋಗ ಮತ್ತು ದೈಹಿಕ ಶಿಕ್ಷಣದೊಂದಿಗೆ ಮಗುವಿನ ಸರ್ವೋತೋಮುಖ ಅಭಿವೃದ್ಧಿಗಾಗಿ ತರಬೇತಿ ಪಡೆದ ಶಿಕ್ಷಕರ ಭೋದಕ ವರ್ಗ, ಒಳ ಮತ್ತು ಹೊರಾಂಗಣ ಕ್ರೀಡಾಂಗಣ, ಬಿಸಿ ಊಟ, ಕ್ಷೀರ ಯೋಜನೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ, ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳಿಗೆ ಶೂ ಮತ್ತು ಮೊಟ್ಟೆ ಸೌಲಭ್ಯ ಸಿಗಲಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಸಹ ಶಿಕಕ್ಷಕರಾದ ಪರಶುರಾಮಪ್ಪ.ಎಂ., ರವೀಶ್, ಸಂದೀಪ್.ಆರ್.ಡಿ, ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಕಿಯರಾದ ಶುಭಾ ಮತ್ತು ಪ್ರಮೋದಿನಿ ಇದ್ದರು.