ಸರ್ಕಾರಿ ನೌಕರರ ಕ್ಯಾಂಟೀನ್ ಶೀಘ್ರ ನಿರ್ಮಾಣ

ಶಿವಮೊಗ್ಗ: ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ದಿನೋಪಯೋಗಿ ತೆರಿಗೆ ರಹಿತ ವಸ್ತುಗಳನ್ನು ಒದಗಿಸಲು ಶೀಘ್ರದಲ್ಲೇ ಸರ್ಕಾರಿ ನೌಕರರ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಪ್ರೆಸ್​ಟ್ರಸ್ಟ್​ನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದಲ್ಲಿ ಮಾತನಾಡಿ, ಸರ್ಕಾರಿ ನೌಕರರ ಜಿಲ್ಲಾ ಸಂಘದ ಹಿಂಭಾಗದಲ್ಲಿ 40*60 ಜಾಗಕ್ಕೆ ಜಿಲ್ಲಾಧಿಕಾರಿಯಿಂದ ಅನುಮತಿ ದೊರೆತಿದೆ. 50 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ನೌಕರರ ತರಬೇತಿ ಕೇಂದ್ರ ಹಾಗೂ ನೌಕರರ ಕ್ಯಾಂಟೀನ್ ನಿರ್ವಿುಸಲಾಗುವುದು ಎಂದು ತಿಳಿಸಿದರು.

ಆರು ವರ್ಷಗಳ ಅವಧಿಯಲ್ಲಿ ಜಿಲ್ಲಾ ಸಂಘದಿಂದ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 2.25 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ನೌಕರರ ಭವನ, 25 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣ, 15 ಲಕ್ಷ ರೂ. ವೆಚ್ಚದಲ್ಲಿ ಲಿಫ್ಟ್, 35 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ವಿವಿಐಪಿ ವಸತಿಗೃಹ, 10 ಲಕ್ಷ ರೂ. ವೆಚ್ಚದಲ್ಲಿ ಆಧುನೀಕರಣ ಮಾಡಲಾಗಿದೆ ಎಂದು ಹೇಳಿದರು.

25 ಲಕ್ಷ ರೂ. ವೆಚ್ಚದಲ್ಲಿ ಆತ್ಯಾಧುನಿಕ ನೌಕರರ ಸೇವಾ ಕೇಂದ್ರ ವಿನ್ಯಾಸ ಮಾಡಲಾಗಿದೆ. ಸಂಘದ ಜಾಗದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ಸ್ಥಾಪಿಸಿ ಆದಾಯ ಮೂಲ ಹೆಚ್ಚಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ನೌಕರರಿಗೆ ಸಭಾಭವನ ನೀಡಲಾಗುತ್ತದೆ. ಇಲಾಖೆ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಭವನ ನೀಡಲಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ, ಉಚಿತ ಹೆಲ್ತ್​ಕಾರ್ಡ್, ಜ್ಯೋತಿ ಸಂಜೀವಿನಿ, ಆಧಾರ್ ಕೇಂದ್ರ, ನೇಪಾಳ ಹಾಗೂ ಕೊಡಗು ಸಂತ್ರಸ್ತರಿಗೆ 5 ಕೋಟಿ ರೂ. ಪರಿಹಾರ ನಿಧಿ ಸಂಗ್ರಹ, ಕ್ರೀಡಾಕೂಟ ಆಯೋಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಇಲಾಖೆ ಪರೀಕ್ಷೆಗಳಿಗೆ ತರಬೇತಿ, ಕಂಪ್ಯೂಟರ್ ಶಿಕ್ಷಣ ಸೇರಿ ಅನೇಕ ಕಾರ್ಯಕ್ರಮಗಳನ್ನು ಸಂಘ ಆಯೋಜಿಸಿದೆ ಎಂದರು.

ಆರನೇ ವೇತನ ಆಯೋಗ ಜಾರಿಗೆ ಶಿವಮೊಗ್ಗ ಸಂಘಟನೆ ಹೆಚ್ಚಿನ ಹೋರಾಟ ನಡೆಸಿತ್ತು. ಅಂದಿನ ಸಿಎಂ ಶಿವಮೊಗ್ಗದಲ್ಲಿಯೇ ಒಪ್ಪಿಗೆ ಕೊಟ್ಟಿದ್ದರು. ನೌಕರರ ಮೇಲೆ ಹಲ್ಲೆ ಸಂದರ್ಭಗಳಲ್ಲಿಯೂ ನೌಕರರ ಪರವಾಗಿ ನಿಂತಿದೆ ಎಂದು ತಿಳಿಸಿದರು. ಪ್ರೆಸ್​ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಇದ್ದರು.

ಕಡಿಮೆ ದರದಲ್ಲಿ ಸೈಟ್ ಹಂಚಿಕೆ:ಜಿಲ್ಲೆಯ ಸರ್ಕಾರಿ ನೌಕರರಿಗೆ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ನಿವೇಶನ ನೀಡಲಾಗುತ್ತಿದೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು. 1,200 ನಿವೇಶನಗಳನ್ನು ಹಣಕಾಸಿನ ನೆರವಿನೊಂದಿಗೆ ಸಾಲ ಸೌಲಭ್ಯ ನೀಡಿ ಒದಗಿಸಲಾಗಿದೆ. ಸೌಹಾರ್ದ ಸಹಕಾರಿ ನಿಯಮಿತ ಸ್ಥಾಪಿಸಿ ಸರಳ ಬಡ್ಡಿ ದರದಲ್ಲಿ ಸುಲಭ ದಾಖಲಾತಿ ಮೂಲಕ 40 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *