ಚಿತ್ರದುರ್ಗ: ಪರಿಶಿಷ್ಟರಲ್ಲಿ ಜಾತಿ ಗಣತಿ ಕುರಿತು ಆರಂಭದಲ್ಲಿ ಆತಂಕವಿತ್ತು. ಅಲ್ಲದೆ, ತಾಂತ್ರಿಕ ತೊಡಕಿನಿಂದಾಗಿ ಕುಂಟುತ್ತಾ ಸಾಗಿದರೂ ಸುಧಾರಣೆ ಬಳಿಕ ವೇಗ ಪಡೆದಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ 30 ವರ್ಷಗಳ ಹೋರಾಟ ಒಂದು ಭಾಗವಾದರೆ, ಈಗಿನ ಜಾತಿ ಗಣತಿ ಸಮೀಕ್ಷೆಯಲ್ಲಿ ಅರ್ಹರ‌್ಯಾರೂ ಹೊರಗೆ ಉಳಿಯಬಾರದು. ಅದಕ್ಕಾಗಿ ತಪ್ಪದೆ, ಈ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಮೀಸಲಾತಿ ಲಾಭ ಪಡೆದು ಉದ್ಯೋಗಸ್ಥರಾದ ಸರ್ಕಾರಿ ನೌಕರರು ರಜೆ ಹಾಕುವ ಮೂಲಕ ಸಮುದಾಯದವರಲ್ಲಿ ಜಾತಿ ಗಣತಿ ಕುರಿತು, ನೈಜ ಮಾಹಿತಿ ದಾಖಲಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅದಕ್ಕಾಗಿ ಯಾವ ಜಾತಿಗೂ ಅನ್ಯಾಯವಾಗದ ರೀತಿ ಸಮಬಾಳು, ಸಮಪಾಲು ತತ್ವದಡಿ ಪರಿಶಿಷ್ಟರಿಗೆ ಮೀಸಲಾತಿ ಹಂಚಲು ಸಮೀಕ್ಷೆಗೆ ಮುಂದಾಗಿದ್ದು, ದೇಶದಲ್ಲೇ ಪ್ರಥಮ ಬಾರಿ ಇಂತಹ ಸಾಹಸದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.
ದೇಶದಲ್ಲೇ ಮೊದಲ ಪ್ರಯತ್ನವಾಗಿ ಆ್ಯಪ್ ಮೂಲಕ ಜಾತಿ ಗಣತಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಸಮಸ್ಯೆ ಕಂಡುಬಂದ ಕೂಡಲೇ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದು, ಸರಿಪಡಿಸುತ್ತಿದ್ದಾರೆ. ಆದರೂ ಕಾರ್ಯ ಪೂರ್ಣಗೊಂಡ ಬಳಿಕವೇ ವಾಸ್ತವಾಂಶ ತಿಳಿಯಲಿದೆ ಎಂದು ತಿಳಿಸಿದರು.
* ಶೇ 75ರಷ್ಟು ಕೃಷಿ ಕಾರ್ಮಿಕರು: ಬೀದಿಬದಿ ಸ್ವಚ್ಛತೆ, ಚಪ್ಪಲಿ ಹೊಲಿಯುವುದು, ಹೋಟೆಲ್, ಕಟ್ಟಡ ನಿರ್ಮಾಣ ಸೇರಿ ವಿವಿಧ ಕ್ಷೇತ್ರದಲ್ಲಿ ಕೂಲಿಕಾರರಾಗಿರುವ ಮಾದಿಗರ ಪೈಕಿ ಶೇ 75ರಷ್ಟು ಕೃಷಿ ಕಾರ್ಮಿಕರು. ಭೂಮಿಗೆ ಹಸಿರು ಸೀರೆ ಹೊದಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ದೇಶದ ಕೃಷಿ ಕ್ಷೇತ್ರ ಬಲವರ್ಧನೆಗೆ ಶ್ರಮಿಸುತ್ತಿದ್ದು, ಬಸವಣ್ಣನ ಕಾಯಕ ತತ್ವದ ರಾಯಭಾರಿಗಳಾಗಿದ್ದಾರೆ ಎಂದು ಬಣ್ಣಿಸಿದರು.
ಇಂತಹ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಒಳಮೀಸಲಾತಿಯೊಂದೇ ಪರಿಹಾರ. ಅದಕ್ಕಾಗಿ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಆಯೋಗ ದತ್ತಾಂಶ ಸಂಗ್ರಹಿಸಿ ಅನ್ಯಾಯಕ್ಕೆ ಒಳಗಾಗಿರುವ ಜಾತಿಯವರಿಗೆ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಆಗುವವರೆಗೂ ಸರ್ಕಾರಿ ಉದ್ಯೋಗ ನೇಮಕಾತಿಗೆ ತಡೆವೊಡ್ಡಲಾಗಿದೆ. ಇದೇ ರೀತಿ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡುತ್ತಿಲ್ಲ. ಒಂದೊಮ್ಮೆ ಮುಂದಾದರೆ, ಅಧಿಕಾರಿಗಳ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಅನಿಲ್ ಕೋಟಿ, ಸಮರ್ಥರಾಯ್, ವಕೀಲರಾದ ಶರಣಪ್ಪ, ರವಿಚಂದ್ರ ಇತರರಿದ್ದರು.