ಸರ್ಕಾರಿ ಜಾಗ ಒತ್ತುವರಿ ಕಿರಿಕಿರಿ

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ:  ಜಮೀನಿಗೆ ಬಂಗಾರದ ಬೆಲೆ ಸಿಗುತ್ತಿರುವುದರ ನಡುವೆ ಸರ್ಕಾರಿ ಜಾಗದ ಒತ್ತುವರಿ ತೆರವು ಜಿಲ್ಲೆಯ ಅಧಿಕಾರಿಗಳಿಗೆ ತಲೆನೋವಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 3,70,415 ಎಕರೆ ಸರ್ಕಾರಿ ಆಸ್ತಿ ಗುರುತಿಸಲಾಗಿದೆ. ಇದರಲ್ಲಿ 61,995 ಎಕರೆ ಒತ್ತುವರಿಯಾಗಿದೆ. ಈ ಪೈಕಿ ಫಾರಂ 50/53, 94ಸಿ ನಡಿ 52,424 ಎಕರೆ ಮತ್ತು ನ್ಯಾಯಾಲಯದಲ್ಲಿ 192 ಎಕರೆ ಸೇರಿ 52,616 ಎಕರೆ ಒತ್ತುವರಿ ವಿವಾದಿತ ಪ್ರಕರಣ ವಿಚಾರಣೆ ಹಂತದಲ್ಲಿದೆ. ಉಳಿದಂತೆ ಒಟ್ಟಾರೆ ಇಲ್ಲಿಯವರೆಗೆ 9,379 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವು ಜೋರಾಗಿ ನಡೆಯುತ್ತಿದೆ. ಇದರಿಂದ ಜಮೀನಿಗೆ ದುಪ್ಪಟ್ಟು ಬೆಲೆ. ಇದಕ್ಕೆ ದಂಧೆಕೋರರು ಕೆಲ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಮತ್ತೊಂದೆಡೆ ಸ್ಥಳೀಯ ಪ್ರಭಾವಿಗಳು ರಾಜಕೀಯ ಮತ್ತು ಆರ್ಥಿಕ ಬಲದಿಂದ ಸ್ವಂತ ಜಮೀನಿಗೆ ಸಮೀಪದಲ್ಲಿರುವ ಅರಣ್ಯ, ಗೋಮಾಳ, ಕೆರೆ-ಕುಂಟೆ ಮತ್ತು ರಾಜಕಾಲುವೆಗಳನ್ನು ಅಕ್ರಮ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕಟ್ಟಡ ನಿರ್ಮಾಣ ಇಲ್ಲವೇ ಕೃಷಿ ಚಟುವಟಿಕೆ ಕೈಗೊಂಡು ಸ್ವಂತ ಆಸ್ತಿಯನ್ನಾಗಿಸಿಕೊಂಡಿದ್ದಾರೆ. ಇದರ ಬಗ್ಗೆ ಹೋರಾಟಗಾರರು ದೂರು ಸಲ್ಲಿಸಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಒತ್ತುವರಿ ವೇಗ, ತೆರವು ವಿಳಂಬ: ಜಿಲ್ಲೆಯಲ್ಲಿ ಒತ್ತುವರಿ ವೇಗವಾಗಿ ನಡೆಯುತ್ತಿದೆ. ಆದರೆ, ತೆರವು ಕಾರ್ಯಾಚರಣೆ ಶಾಸ್ತ್ರಕ್ಕೆ ಎನ್ನುವಂತೆ ಆಮೆಗತಿಯಲ್ಲಿ ಸಾಗುತ್ತಿದೆ. 2013ನೇ ಸಾಲಿನಿಂದಲೂ 2018ರವರೆಗೆ ಕೇವಲ 7668 ಎಕರೆ ತೆರವುಗೊಳಿಸಲಾಗಿದೆ. ಇನ್ನೂ ಬಡ ಮತ್ತು ಮಧ್ಯಮ ವರ್ಗದ ಜನರ ವಿಚಾರದಲ್ಲಿ ನಿರ್ದಾಕ್ಷಿಣ್ಯ ಧೋರಣೆಯಲ್ಲಿ ಕಾನೂನು ಪಾಲಿಸುತ್ತಿರುವ ಅಧಿಕಾರಿಗಳು, ಪ್ರಭಾವಿಗಳ ಪಾಲಿಗೆ ಮೃದು ವ್ಯಕ್ತಿಗಳಾಗಿದ್ದಾರೆ. ಮತ್ತೊಂದೆಡೆ ತೆರವಿನ ಸಂದರ್ಭದಲ್ಲಿ ಗಲಾಟೆ, ಆತ್ಮಹತ್ಯೆ ಬೆದರಿಕೆ, ರಾಜಕಾರಣಿಗಳ ಶಿಫಾರಸು ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಹಾಗೆಯೇ ಅರ್ಧಂಬರ್ಧ ಸರ್ವೆ, ದಾಖಲೆಗಳ ಕೊರತೆ, ಖಾಲಿ ಸಿಬ್ಬಂದಿ ಮತ್ತು ಕೆಲಸದ ಒತ್ತಡದಿಂದ ತೆರವಿನ ಕಡೆಗೆ ಹೆಚ್ಚಿನ ಗಮನಹರಿಸುತ್ತಿಲ್ಲ. ಚಿಕ್ಕಬಳ್ಳಾಪುರ ಪ್ರಥಮ: ಚಿಕ್ಕಬಳ್ಳಾಪುರ ಜಿಲ್ಲೆಯ ಆರೂ ತಾಲೂಕುಗಳ ಪೈಕಿ ಚಿಕ್ಕಬಳ್ಳಾಪುರವೇ ಒತ್ತುವರಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 28,241 ಎಕರೆ ಒತ್ತುವರಿಯಾಗಿದೆ. ಉಳಿದಂತೆ ಚಿಂತಾಮಣಿಯಲ್ಲಿ 11,428, ಗೌರಿಬಿದನೂರು 6855, ಬಾಗೇಪಲ್ಲಿ 6518, ಶಿಡ್ಲಘಟ್ಟ 4850 ಮತ್ತು ಗುಡಿಬಂಡೆಯಲ್ಲಿ 4101 ಎಕರೆ ಒತ್ತುವರಿಯಾಗಿದೆ.

. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಜಾಗಗಳ ಅಕ್ರಮ ಒತ್ತುವರಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ತಿಂಗಳಿಗೆ ತಾಲೂಕುವಾರು ತಲಾ ಐದು ಕೆರೆಗಳ ಒತ್ತುವರಿ ತೆರವುಗೊಳಿಸುವ ಗುರಿ ಹೊಂದಲಾಗಿದೆ.

| ಆರತಿ, ಹೆಚ್ಚುವರಿ ಜಿಲ್ಲಾಧಿಕಾರಿ, –