ಸರ್ಕಾರಿ ಕ್ವಾರಂಟೈನ್​ಗೆ ಜಿಲ್ಲಾಡಳಿತದಿಂದ ಸಿದ್ಧತೆ

ಧಾರವಾಡ: ಕರೊನಾ ಸೋಂಕು ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣಗಳಿರುವವರನ್ನು ಸರ್ಕಾರಿ ಕ್ವಾರಂಟೈನ್​ನಲ್ಲಿ ಇಡಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.

ಕೆಲವರನ್ನು ಸದ್ಯ ಅವರ ಮನೆಗಳಲ್ಲೇ ಪ್ರತ್ಯೇಕವಾಗಿರಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೆ ಕೆಲವರು ‘ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು’ ಎಂಬ ನಿಯಮ ಪಾಲಿಸುತ್ತಿಲ್ಲ ಎಂಬ ದೂರುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಸರ್ಕಾರದ ಕಣ್ಗಾವಲಿನಲ್ಲೇ ಕ್ವಾರೆಂಟೈನ್ ಮಾಡಲು ಅವಳಿ ನಗರದಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ. ಪ್ರತ್ಯೇಕ ವಾಸದ ಅವಧಿಯಲ್ಲಿ ಚಿಕಿತ್ಸೆಗೆ ಸಹಾಯ ಮಾಡುವ ಸ್ಟಾಫ್ ನರ್ಸ್​ಗಳು, ಪ್ರಯೋಗಾಲಯ ಸಹಾಯಕರು, ಡಿ ಗ್ರೂಪ್ ನೌಕರರಿಗೆ ಹಾಗೂ ಹೋಟೆಲ್ ಮಾಲೀಕರು, ವ್ಯವಸ್ಥಾಪಕರು, ಅಡುಗೆಯವರು ಹಾಗೂ ರೂಂ ಬಾಯ್ಗಳಿಗೆ ಸೂಕ್ತ ತರಬೇತಿ ಏರ್ಪಡಿಸಲು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಳ್ಳುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಕಾರ್ಯ ಪಡೆಯ ಸಭೆ ನಡೆಸಿದ ಡಿ.ಸಿ. ದೀಪಾ ಚೋಳನ್, ಅವಳಿ ನಗರದ ಪ್ರಮುಖ ಹೋಟೆಲ್​ಗಳು, ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳನ್ನು ಗುರುತಿಸಿ ಅವುಗಳ ಅಧಿಕಾರಿಗಳು, ಮಾಲೀಕರು, ಸಿಬ್ಬಂದಿ ವಿವರಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೌಚಗೃಹ, ಸ್ನಾನದ ಕೋಣೆ ಹೊಂದಿ ಕೊಂಡಿರುವ ಕೊಠಡಿಗಳು ಅಥವಾ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಕಲ್ಪಿಸಲು ಸಾಧ್ಯವಿರುವ ಕಟ್ಟಡಗಳ ಪಟ್ಟಿ ಮಾಡಬೇಕು. ನರ್ಸ್​ಗಳು, ಪ್ರಯೋಗಾಲಯ ಸಹಾಯಕರು, ಗ್ರೂಪ್ ಡಿ ನೌಕರರು, ಆಂಬುಲೆನ್ಸ್ ಚಾಲಕರಿಗೆ ವೃತ್ತಿಪರ ನಿರ್ವಹಣಾ ತರಬೇತಿ ಹಾಗೂ ಹೋಟೆಲ್​ಗಳ ಮಾಲೀಕರು, ವ್ಯವಸ್ಥಾಪಕರು, ಅಡುಗೆಯವರು, ಭದ್ರತಾ ಸಿಬ್ಬಂದಿಗೆ ಕ್ವಾರೆಂಟೈನ್ ನಿಯಮಗಳ ತರಬೇತಿ ನೀಡಲು ಸಾಮಗ್ರಿ ಸಿದ್ಧಪಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಅವಧಿಯಲ್ಲಿ ಬೇಕಾಗುವ ಮಾಸ್ಕ್, ಸ್ಯಾನಿಟೈಸರ್, ಪರ್ಸನಲ್ ಪ್ರೊಟೆಕ್ಷನ್ ಸಾಮಗ್ರಿ, ಥರ್ಮಲ್ ಸ್ಕ್ಯಾನಿಂಗ್ ಗ್ಯಾಜೆಟ್, ರಕ್ತದೊತ್ತಡ, ಐ.ವಿ. ಇಂಜೆಕ್ಷನ್ ಉಪಕರಣಗಳು ಮತ್ತಿತರ ಸಾಧನಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಪೂರೈಕೆದಾರರಿಗೆ ಬೇಡಿಕೆ ಪಟ್ಟಿ ಸಲ್ಲಿಸಬೇಕು. ಪ್ರಾರಂಭಿಕ ಹಂತದಲ್ಲಿ ಸುಮಾರು 20 ಕೇಂದ್ರಗಳಲ್ಲಿ ಈ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಸುಮಾರು 1025 ಆಶಾ ಕಾರ್ಯಕರ್ತೆಯರು, 207 ಎಎನ್​ಎಂಗಳಿಗೂ ತರಬೇತಿ ನೀಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಪ್ರಯೋಗಾಲಯ ಸಹಾಯಕರು ಗ್ರೂಪ್ ಡಿ ಸಿಬ್ಬಂದಿಯನ್ನು ನೇಮಿಸಿಕೊಳಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಡಾ.ಬಿ. ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಡಾ. ಲಕ್ಷ್ಮೀಕಾಂತ, ಇತರರು ಇದ್ದರು.

ನಾಲ್ವರು ಶಂಕಿತರ ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ನಾಲ್ವರು ಶಂಕಿತ ಸೋಂಕಿತರು ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಈವರೆಗೆ ಜಿಲ್ಲೆಯಲ್ಲಿ 48 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 44 ಜನರ ವರದಿ ನೆಗೆಟಿವ್ ಬಂದಿದೆ. ಒಬ್ಬಾತನಿಗೆ ಕರೊನಾ ದೃಢಪಟ್ಟಿದ್ದು, ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ನಡೆದಿದೆ. ಪ್ರಯೋಗಾಲಯಕ್ಕೆ ಗಂಟಲ ದ್ರವದ ಮಾದರಿ ಕಳುಹಿಸಲಾಗಿರುವ ಇನ್ನೂ ಮೂವರ ವರದಿ ಬರಬೇಕಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 496 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 125 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾಡ್​ಗಳಲ್ಲಿ 6 ಜನ ದಾಖಲಾಗಿದ್ದಾರೆ. 307 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…