ಸರ್ಕಾರಿ ಕಾಲೇಜ್ ಸ್ಥಳಾಂತರ

ರೋಣ: ಕಳೆದ ಮೂರು ದಶಕಗಳಿಂದ ಅಸಂಖ್ಯಾತ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಳು ಬೆಳಗಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್ ಹಾಜರಾತಿ ಕೊರತೆಯಿಂದ ಸ್ಥಳಾಂತರಗೊಂಡಿದೆ.

ವಿದ್ಯಾಲಯ ಸ್ಥಳಾಂತರಕ್ಕೆ ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಮುಂದಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯಿಂದಾಗಿ ಪದವಿ ಶಿಕ್ಷಣದಿಂದ ವಂಚಿತವಾಗುತ್ತಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಪ್ರಗತಿಪರ ಸಂಘಟನೆಗಳ ಹೋರಾಟದ ಫಲವಾಗಿ ಸ್ಥಾಪನೆಗೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ 2019-20ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡಕ್ಕೆ ಸ್ಥಳಾಂತರಗೊಂಡಿದೆ.

1980ರ ದಶಕದಲ್ಲಿ ಅಂದಿನ ಶೈಕ್ಷಣಿಕ ವಾಸ್ತವಾಂಶವನ್ನು ಗಂಭೀರವಾಗಿ ಪರಿಗಣಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಅಂದಿನ ಶಾಸಕ ಜಿ.ಎಸ್. ಪಾಟೀಲ, ಆಗಿನ ಶಿಕ್ಷಣ ಸಚಿವ ಕೆ.ಎಚ್. ರಂಗನಾಥ ಅವರಿಗೆ ನಿರಂತರ ಒತ್ತಡ ಹೇರಿ ಸರ್ಕಾರಿ ಪದವಿ ಕಾಲೇಜ್ ಮಂಜೂರು ಮಾಡಿಸಿದರು.

1980-81ರಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯಾರಂಭಗೊಂಡ ಕಾಲೇಜ್ ಹಲವು ಸಂಕಷ್ಟ ಎದುರಿಸಿತು. ಈ ಕಾಲೇಜ್​ಗೆ ಶಾಶ್ವತ ಕಟ್ಟಡ ನಿರ್ವಿುಸುವ ಉದ್ದೇಶದಿಂದ ಪಟ್ಟಣದ ಆರ್.ಬಿ. ಗಿರಡ್ಡಿ ಕುಟುಂಬ ಬದಾಮಿ ರಸ್ತೆಯಲ್ಲಿ 5 ಜಮೀನನನ್ನು ಖರೀದಿಸಿ 1999ರಲ್ಲಿ ಉಚಿತವಾಗಿ ನೀಡಿತು. ದಾನಿಗಳು ಕಾಲೇಜ್ ಕಟ್ಟಡಕ್ಕಾಗಿ ಉಚಿತ ಜಮೀನು ನೀಡಿದ ಕಾರಣ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎಂದು ನಾಮಕರಣ ಮಾಡಲಾಯಿತು. 2000ರಲ್ಲಿ ಅಂದಿನ ಶಾಸಕ ಜಿ.ಎಸ್. ಪಾಟೀಲ ಕಾಲೇಜ್ ಕಟ್ಟಡ ನಿರ್ವಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಗೊಳಿಸಿದರು. 2006ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.

ಸುಸಜ್ಜಿತ ಕಾಲೇಜ್ ಕಟ್ಟಡ

50 ಲಕ್ಷ ರೂ.ನಲ್ಲಿ ಸುಸಜ್ಜಿತ ಕಟ್ಟಡ ನಿರ್ವಣ, 70 ಲಕ್ಷ ರೂ. ಅನುದಾನದಲ್ಲಿ ಮಹಡಿ ಕಟ್ಟಡ, 50 ಲಕ್ಷ ರೂ.ನಲ್ಲಿ ಅಡಿಟೋರಿಯಂ, 20 ಲಕ್ಷ ರೂ.ನಲ್ಲಿ ಕಾಲೇಜ್ ಪ್ರಾಚಾರ್ಯರ ವಸತಿ ಗೃಹ ನಿರ್ವಿುಸಲಾಗಿದ್ದು, ಜಿಲ್ಲೆಯ ಇತರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಗಳಿಗೆ ಇದು ಮಾದರಿಯಾಗಿದೆ.

ರೋಣದಿಂದ ಗುಳೇದಗುಡ್ಡಕ್ಕೆ ಸ್ಥಳಾಂತರಗೊಂಡಿರುವ ಕಾಲೇಜ್ ಮರಳಿ ರೋಣಕ್ಕೆ ಬರಬೇಕು. ಇಲ್ಲವಾದಲ್ಲಿ ಶಾಲೆ ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಪ್ರಗತಿಪರ ವಿವಿಧ ಸಂಘಟನೆಗಳೊಂದಿಗೆ ಹೋರಾಟ ನಡೆಸುತ್ತೇವೆ. 
| ಅನೀಲ ನವಲಗುಂದ, ಹಳೇ ವಿದ್ಯಾರ್ಥಿ

ಕಾಲೇಜ್ ಸ್ಥಳಾಂತರವಾದ ಬಗ್ಗೆ ನಿಖರ ಮಾಹಿತಿಯಿಲ್ಲ. ಸಮಗ್ರ ಮಾಹಿತಿ ಪಡೆದು ಪರಿಶೀಲಿಸಲಾಗುವುದು.
| ಶಿವಾನಂದ ಕರಾಳೆ, ಅಪರ ಜಿಲ್ಲಾಧಿಕಾರಿ

ಹಾಜರಾತಿ ಕಡಿಮೆಯಾಗಲು ಸರ್ಕಾರ ಹಾಗೂ ವಿಶ್ವವಿದ್ಯಾಲಯದ ದ್ವಂದ್ವ ನೀತಿಯೇ ಕಾರಣ. ಕಳೆದ ಕೆಲ ವರ್ಷಗಳಿಂದ ಕಾಲೇಜ್ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಸರ್ಕಾರವು ನಮ್ಮ ಕಾಲೇಜಿನ ಕೂಗಳತೆಯ ದೂರದಲ್ಲಿ ಖಾಸಗಿ ಪ್ರಥಮ ದರ್ಜೆ ಕಾಲೇಜ್​ಗೆ ಅನುಮತಿ ನೀಡಿತು. ಖಾಸಗಿ ಕಾಲೇಜ್​ನವರು ಉಚಿತ ಪ್ರವೇಶ ನೀಡಿದ ಪರಿಣಾಮ ಹಾಜರಾತಿ ಕುಸಿತಗೊಂಡಿದೆ. ಇದೇ ನೆಪವೊಡ್ಡಿ ನಮ್ಮ ಕಾಲೇಜನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಿಸಿದ್ದಾರೆ. 
| ಎಫ್.ಆರ್. ಚೆನ್ನಪ್ಪಗೌಡ್ರ, ಪ್ರಭಾರಿ ಪ್ರಾಚಾರ್ಯ

Leave a Reply

Your email address will not be published. Required fields are marked *