ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಪರ ವಾದಿಸಲು ವಕೀಲರ ಕೊರತೆ ಇರುವುದರಿಂದ ಈ ವರ್ಗದವರು ನ್ಯಾಯವಾದಿಗಳಾಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಭಾನುವಾರ ಎಸ್‌ಸಿ ಮತ್ತು ಎಸ್‌ಟಿ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ 2021-22ನೇ ಹಾಗೂ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರು ಅಥವಾ ಕೆ.ಆರ್.ನಗರ ಕ್ಷೇತ್ರದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ನಾವೆಲ್ಲಾ ಇಂದು ಈ ರೀತಿ ವೇದಿಕೆಗಳಲ್ಲಿ ಕುಳಿತು ಮಾತನಾಡಲು, ನೆಮ್ಮದಿಯ ಬದುಕು ಸಾಗಿಸಲು ಶಕ್ತಿ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್. ಪ್ರತಿಯೊಬ್ಬರು ಬಾಬಾ ಸಾಹೇಬರ ಆಶಯದಂತೆ ಶಿಕ್ಷಣ ಪಡೆದು ದೇಶದಲ್ಲಿ ಉತ್ತಮ ಪ್ರಜೆಗಳಾಗಬೇಕು. ಇದಕ್ಕೆ ಉತ್ತಮ ಸಾಧಕರ, ಶಿಕ್ಷಕರ, ತಂದೆ ತಾಯಿಗಳ ಸಲಹೆ ಪಡೆದು ಮುನ್ನಡೆಯಬೇಕಿದೆ ಎಂದರು.
ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಸಮುದಾಯದಲ್ಲಿರುವ ಉಳ್ಳವರು ಆ ವರ್ಗಗಳ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಬೇಕು. ಎಲ್ಲರೂ ಶಿಕ್ಷಿತರಾದಾಗ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ. ಈ ವಿಚಾರವನ್ನು ನೌಕರರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.
ಸಂಘಕ್ಕೆ ಸಿಎ ನಿವೇಶನ: ಪದಾಧಿಕಾರಿಗಳು ಸಂಘವನ್ನು ಇನ್ನಷ್ಟು ಉತ್ತಮವಾಗಿ ಸಂಘಟಿಸಬೇಕು, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಬೇಕು. ಈ ಸಂಘಕ್ಕೆ ಪಟ್ಟಣದ ಗೌತಮ ನಗರದಲ್ಲಿ ಸಿಎ ನಿವೇಶನ ಮಂಜೂರು ಮಾಡಿಸಿ ಕೊಡಿಸುವುದರ ಜತೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಮಾತನಾಡಿ,ಶೋಷಿತರು, ಬಡವರು ಮತ್ತು ದಲಿತ ಸಮುದಾಯವರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರೂ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿ ಆಗಬೇಕು. ಅದಕ್ಕಾಗಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೌಕರರ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಸಂಘದ ವತಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಆಯಾ ತಾಲೂಕು ಶಾಖೆಗಳು ಮಾಡಲಿವೆ. ಇದಕ್ಕೆ ಸಮುದಾಯದವರು ಎಲ್ಲ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು
ಕಾರ್ಯಕ್ರಮದಲ್ಲಿ 2021-22ನೇ ಹಾಗೂ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮತ್ತು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಾಹಿತಿ ಎನ್.ಆರ್.ಶಿವರಾಮು, ಸಂಘದ ಜಿಲ್ಲಾ ಪ್ರತಿನಿಧಿ ಮಹದೇವನಾಯಕ, ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಗೋವಿಂದರಾಜು, ಪದಾಧಿಕಾರಿಗಳಾದ ಕೆ.ಸಿ.ವೀರಭದ್ರಯ್ಯ, ಎನ್.ಕೆ.ಮಹದೇವಪ್ಪ, ರಾಮಕೃಷ್ಣ, ಸಿ.ಎಂ.ರೇಖಾ, ಜೆ.ಮಹದೇವು, ಕುಮಾರ್, ಸತೀಶ್, ಪಿ.ಮಹದೇವಸ್ವಾಮಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಸ್ವಾಮಿ, ಕಾರ್ಯದರ್ಶಿ ಡಾ.ಕೃಷ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಪತ್‌ಕುಮಾರ್, ಶಿಕ್ಷಣ ಸಂಯೋಜಕ ಡಿ.ದಾಸಪ್ಪ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.