ಕುದೂರು: ಮಾಗಡಿ ತಾಲೂಕು ಸೋಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲೀಗ ಆರೋಗ್ಯದ ಕಾಳಜಿ ಜತೆಗೆ ಸುಂದರ ಪರಿಸರ ನಿರ್ವಣವಾಗಿದೆ. ಸೋಲೂರು ಪಂಚಾಯಿತಿ ನೆರವು ಹಾಗೂ ವೈದ್ಯೆ ಡಾ. ರೂಪಚಂದ್ರಮಾಲಾ ಅವರ ಶ್ರಮದಿಂದಾಗಿ ಆಸ್ಪತ್ರೆಗೆ ಹೊಸ ರೂಪ ಬಂದಿದೆ.
ಈ ಹಿಂದೆ ಆಸ್ಪತ್ರೆ ಆವರಣದ ಖಾಲಿ ಜಾಗ ಗಿಡ-ಗಂಟಿಗಳಿಂದ ತುಂಬಿತ್ತು. 2018ರಲ್ಲಿ ಸೇವೆಗೆ ಬಂದ ಡಾ. ರೂಪಚಂದ್ರಮಾಲಾ ಆಸ್ಪತ್ರೆ ಇಂದಿನ ಸ್ಥಿತಿಗೆ ಕಾರಣಕರ್ತರು. ಹಂತ ಹಂತವಾಗಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸುಂದರ ವಾತಾವರಣ ಸೃಷ್ಟಿಗೆ ಶ್ರಮಿಸಿದರು. ಸಹೋದ್ಯೋಗಿಗಳ ಜತೆಗೆ ಆಸ್ಪತ್ರೆ ಸೇರಿ ಆವರಣ ಸ್ವಚ್ಛಗೊಳಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಆಸ್ಪತ್ರೆ ಆವರಣ ಗಿಡಮೂಲಿಕೆ ಸಸ್ಯಗಳು, ಫಲಪುಷ್ಪ ಗಿಡಗಳು ಮೊದಲಾದವುಗಳಿಂದ ಕಂಗೊಳಿಸುತ್ತಿದೆ. ಗಿಡಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೆ, ಮಳೆ ನೀರಿನ ಕೊಯ್ಲು ವ್ಯವಸ್ಥೆ ಸಹ ಇದೆ.
ಆಂಬುಲೆನ್ಸ್ ಸೇವೆ: ಸೋಲೂರಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಆಸ್ಪತ್ರೆ ಇದೆ. ರಾಷ್ಟೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಹೀಗಾಗಿ ಆಂಬುಲೆನ್ಸ್ ಕೂಡ ಸಿದ್ಧವಾಗಿರುತ್ತದೆ. ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರಿಗೆ ಪ್ರಾಮಾಣಿಕ ಸೇವೆ ನೀಡಲಾಗುತ್ತಿದೆ.
ಆಸ್ಪತ್ರೆ 30 ಹಾಸಿಗೆಗಳ ಸೌಲಭ್ಯ ಹೊಂದಿದೆ. ಹೊರರೋಗಿಗಳ ತಪಾಸಣೆ, ಗರ್ಭಿಣಿ ತಪಾಸಣೆ ಮತ್ತು ಮಕ್ಕಳ ಲಸಿಕಾ ಕಾರ್ಯಕ್ರಮ, ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ಮಡಿಲು ಕಾರ್ಯಕ್ರಮ, ತಾಯಿ ಭಾಗ್ಯ, ಪ್ರಸೂತಿ ಆರೈಕೆ, ಹೆರಿಗೆ ಸೌಲಭ್ಯ, ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆ, ಪ್ರಯೋಗಾಲಯ ಸೌಲಭ್ಯ, ಆಪ್ತ ಸಮಾಲೋಚನಾ ವಿಭಾಗಗಳಲ್ಲಿ ಸೇವೆ ಲಭ್ಯವಿದೆ.
ಆಸ್ಪತ್ರೆ ಜನಸಾಮಾನ್ಯರ ಸೇವೆಗಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಆಸ್ಪತ್ರೆ ಆವರಣಕ್ಕೆ ಹೊಸ ರೂಪ ನೀಡಲು ಯೋಜನೆ ಹೊಂದಿದ್ದು, ಸೋಲೂರು ಗ್ರಾಪಂ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಆಸ್ಪತ್ರೆಗೆ ಹೊಸರೂಪ ಬಂದಿದೆ.
| ಡಾ. ರೂಪಚಂದ್ರಮಾಲಾ, ವೈದ್ಯಾಧಿಕಾರಿ, ಸೋಲೂರು ಸಮುದಾಯ ಆರೋಗ್ಯಕೇಂದ್ರ
6 ತಿಂಗಳ ಹಿಂದೆ ಸ್ನೇಹಿತನಿಗೆ ಅಪಘಾತವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಂದಿಗೂ ಇಂದಿಗೂ ಆಸ್ಪತ್ರೆ ವಾತಾವರಣ ಸಂಪೂರ್ಣ ಬದಲಾಗಿದೆ. ವೈದ್ಯಕೀಯ ಸೇವೆ ಉತ್ತಮವಾಗಿದೆ, ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳನ್ನು ನಾಚಿಸುವಂತಿದೆ. ಆಸ್ಪತ್ರೆಯ ಮುಂಭಾಗ ಉದ್ಯಾನ ಮನಸೆಳೆಯುತ್ತದೆ.
| ಜಗದೀಶ್, ಪರಿಸರ ಪ್ರೇಮಿ, ಕುದೂರು