ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿ

ಬೆಂಗಳೂರು: ರಾಜ್ಯದಲ್ಲಿ ವೈದ್ಯರು ಕೊರತೆ ನಡುವೆಯೂ ಹಲವು ಪ್ರಾಮಾಣಿಕ ವೈದ್ಯರು ಹಗಲು-ರಾತ್ರಿ ಎನ್ನದೆ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ಹುದ್ದೆಗಳ ಭರ್ತಿ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕೆಲಸದ ಹೊರೆ ಹೆಚ್ಚುತ್ತಲೇ ಸಾಗಿದೆ.’ ವೈದ್ಯೋ ನಾರಾಯಣ ಹರಿ’ ಈ ಮಾತು ಅಕ್ಷರಶಃ ಸತ್ಯ. ಏನೇ ಕಾಯಿಲೆ ಬಂದರೂ ನಾವು ಮೊದಲು ನಂಬುವುದೇ ವೈದ್ಯರನ್ನು. ಆದುದರಿಂದ ನಾವು ವೈದ್ಯ ವೃತ್ತಿಯನ್ನು ಗೌರವ ಕೊಡುತ್ತೇವೆ. ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಗಳಿಗೆ ನೂರಾರು ರೋಗಿಗಳು ಬರುತ್ತಾರೆ. ಅವರ ಯೋಗ ಕ್ಷೇಮ ವಿಚಾರಿಸುವುದಕ್ಕೆ ತಾಳ್ಮೆ ಮುಖ್ಯವಾಗಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ರೋಗಿಗಳು ಸಾವನ್ನಪ್ಪಿದಾಗ ಕೂಗಾಡಿ, ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರ ಮೇಲೆ ಹಲ್ಲೆ ಮಾಡುತ್ತಾರೆ. ಈ ಎಲ್ಲವನ್ನೂ ಸಹಿಸಿಕೊಂಡು ವೈದ್ಯರು ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಸಕಾಲದಲ್ಲಿ ಔಷಧ ಸಿಗಲಿ

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಷ್ಟೇ ಔಷಧಗಳು ಸಿಗದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತೆಗಳನ್ನು ಅವಲಂಬಿಸುತ್ತಾರೆ. ಆದುದರಿಂದ ರಾಜ್ಯ ಸರ್ಕಾರವು ಸಕಾಲದಲ್ಲಿ ರೋಗಿಗಳಿಗೆ ಔಷಧ ಒದಗಿಸುವುದು ಮುಖ್ಯ. ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆ ಸಮರ್ಪಕವಾಗಿರದಿದ್ದರೆ ರೋಗಿಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ ಎನ್ನುವುದು ಬಹುತೇಕ ಸರ್ಕಾರಿ ವೈದ್ಯರ ಅಳಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ರಾಜ್ಯದಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ಶೀಘ್ರದಲ್ಲೇ ನೇಮಕ ಮಾಡಬೇಕಿದೆ.

| ಡಾ.ಶ್ರೀನಿವಾಸ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ