ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಟ


05ಪಾಂಡವಪುರ: ರೈತ ನಾಯಕ ಹಾಗೂ ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡು ಹತಾಶರಾಗಿರುವ ರೈತ ಸಮುದಾಯಕ್ಕೆ ಚೈತನ್ಯ ತುಂಬಲು ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ರೈತ ಸಂಘ ಒಗ್ಗೂಡಿ ಹೋರಾಟ ನಡೆಸಲಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿಯ ಸ್ವಾಮಿವಿವೇಕಾನಂದ ಬಾನುಲಿ ಕೇಂದ್ರದಲ್ಲಿ ಆಯೋಜಿಸಿದ್ದ ಮೈಸೂರು ವಲಯ ಮಟ್ಟದ ರೈತಸಂಘ ಪದಾಧಿಕಾರಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ರೈತಸಂಘ ಗಟ್ಟಿಯಾಗಿದೆ ಎಂಬ ಸಂದೇಶ ನೀಡುವ ಉದ್ದೇಶದಿಂದ ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ದಿನದಂದು ಅವರ ಪ್ರತಿಮೆ ಅನಾವರಣ ಹಾಗೂ 30 ಸಾವಿರಕ್ಕೂ ಹೆಚ್ಚು ರೈತರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.

ರೈತಸಂಘಕ್ಕೆ ಹೆಚ್ಚು ಯುವಕರನ್ನು ಸೆಳೆಯುವ ಮೂಲಕ ಹೊಸ ಹುರುಪಿನೊಂದಿಗೆ ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹೋರಾಟ ಮಾಡಲಾಗುವುದು. ಇದಕ್ಕೆ ಸಂಘದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಶಂಭೂವಿನಹಳ್ಳಿ ಸುರೇಶ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಕೊಟ್ಟ ಮಾತನ್ನೆ ಮರೆತು ಆಡಳಿತ ನಡೆಸುತ್ತಿದ್ದು, ಸರ್ಕಾರ ಇದ್ದು ಸತ್ತಾಂತಾಗಿದೆ. ಭತ್ತ ಖರೀದಿ ಕೇಂದ್ರ ತೆರೆಯಲಿಲ್ಲ. ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ರೈತರ ಸಾಲಮನ್ನಾ ಮಾಡಿ ಋಣಮುಕ್ತ ಪತ್ರ ನೀಡಲಿಲ್ಲ. ಹೀಗಾಗಿ ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಸಚಿವರ ದರ್ಪಕ್ಕೆ ಕಡಿವಾಣ ಹಾಕಿ: ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಸಚಿವರು ರೈತಸಂಘದವರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ಹೋರಾಟದ ಮೂಲಕ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.

ಈಗ ಯಾರೂ ನಾಯಕರು?: ದರ್ಶನ್ ಪುಟ್ಟಣ್ಣಯ್ಯ ಅವರು ವಿದೇಶದಲ್ಲಿ ಇದ್ದರೆ. ಯಾರ ಮುಂದಾಳತ್ವದಲ್ಲಿ ನಾವು ಹೋರಾಟ ಮಾಡಬೇಕು? ಎಂಬ ಪ್ರಶ್ನೆಗಳು ಸಭೆಯಲ್ಲಿ ಕೇಳಿ ಬಂದವಲ್ಲದೆ, ಕ್ಷೇತ್ರದ ಎಲ್ಲ ಗ್ರಾಮದಲ್ಲೂ ರೈತಸಂಘದ ನಾಮಫಲಕ ಹಾಕುವ ಮೂಲಕ ಹಿಂದೆ ಸಂಘದ ಬಗ್ಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಇದ್ದ ಭಾವನೆ ಮೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ರೈತ ಮುಖಂಡರಾದ ಎ.ಎಲ್.ಕೆಂಪೂಗೌಡ, ಕ್ಯಾತನಹಳ್ಳಿ ದಯಾನಂದ್, ಕೆ.ಟಿ.ಗೋವಿಂದೇಗೌಡ, ಮಹದೇವಸ್ವಾಮಿ, ರಾಮಕೃಷ್ಣೇಗೌಡ, ಕೆನ್ನಾಳು ನಾಗರಾಜು, ಹರವು ಪ್ರಕಾಶ್ ಇತರರು ಇದ್ದರು.