ರಾಜ್ಯ ಮಟ್ಟದ ಸಂಸ್ಕೃತೋತ್ಸವ * ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯ

ಸರ್ಕಾರದ ನೀತಿಯಿಂದ ಅವನತಿಯತ್ತ ಸಾಗುತ್ತಿರುವ ಸಂಸ್ಕೃತ

ಶಿರಸಿ: ಸಂಸ್ಕೃತ ಸತ್ತ ಭಾಷೆಯಲ್ಲ. ಆದರೆ, ಅದನ್ನು ಸಾಯಿಸುವ ನಿರಂತರ ಪ್ರಯತ್ನ ನಡೆದಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಂಸ್ಕೃತೋತ್ಸವದಲ್ಲಿ ಅವರು ಮಾತನಾಡಿದರು. ಸಂಸ್ಕೃತದ ಕುರಿತು ಸರ್ಕಾರದ ನೀತಿ ಮತ್ತು ಭಾಷೆಯ ಕುರಿತ ನಮ್ಮ ಪ್ರೀತಿ ಇಲ್ಲದಿರುವುದರಿಂದ ಸಂಸ್ಕೃತದ ಅವನತಿಗೆ ಕಾರಣವಾಗುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಭರ್ತಿಯಾಗುತ್ತಿಲ್ಲ. ಶಾಲಾ-ಕಾಲೇಜ್​ಗಳಲ್ಲಿ ಅಧ್ಯಾಪಕರ ಕೊರತೆ ಕಂಡುಬರುತ್ತಿದೆ. ಪ್ರಥಮ ಭಾಷೆಯಾಗಿ ಸಂಸ್ಕೃತದಲ್ಲಿ ಅಧ್ಯಯನ ಮಾಡಿದರೆ ರಾಜ್ಯದಲ್ಲಿ ಉದ್ಯೋಗವೇ ಸಿಗದ ಸ್ಥಿತಿ ಇದೆ. ಹೀಗಾಗಿ ಪ್ರೌಢ ಶಾಲೆಗಳು ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಕಲಿಯಲು ಅವಕಾಶ ನೀಡುತ್ತಿವೆ. ಅಧ್ಯಾಪಕರು ಸಹ ಸಂಸ್ಕೃತ ರಕ್ಷಣೆಗೆ ಪ್ರಯತ್ನ ನಡೆಸುತ್ತಿಲ್ಲ. ಕೇಂದ್ರೀಯ ವಿದ್ಯಾಪೀಠಗಳಲ್ಲಿ ಇರುವಂತೆ ಉಳಿದ ಪಾಠಶಾಲೆಗಳಲ್ಲಿ ಶೈಕ್ಷಣಿಕ ಪದ್ಧತಿ ಪರಿಷ್ಕರಣೆಯಿಂದ ವ್ಯಾಸಂಗ ಮಾಡಿದರೂ ವಿದ್ಯಾರ್ಥಿಗಳು ಪಾಂಡಿತ್ಯ ಪಡೆಯದ ಪರಿಸ್ಥಿತಿ ಇದೆ. ಎಲ್ಲ ಹಂತಗಳನ್ನು ಗಮನಿಸಿದಾಗ ಸಂಸ್ಕೃತ ಭಾಷೆಯನ್ನು ಕೊಲ್ಲುವ ಹುನ್ನಾರ ರಾಜ್ಯದಲ್ಲಿ ನಡೆದಂತಿದೆ ಎಂದರು.

ಭಾರತೀಯ ಭಾಷೆಗಳ ಮಾತೃ ಭಾಷೆಯಾದ ಸಂಸ್ಕೃತ ತನ್ನದೇ ಆದ ವೈಜ್ಞಾನಿಕತೆಯನ್ನು ಹೊಂದಿದೆ. ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಸಂಸ್ಕೃತದಿಂದ ಅನೇಕ ಭಾಷೆಗಳು ಹುಟ್ಟಿದ್ದನ್ನು ಕಾಣಬಹುದಾಗಿದೆ. ಭಾರತೀಯ ಭಾಷೆಗಳಲ್ಲಿ ಶಬ್ದಗಳ ಕೊರತೆಯನ್ನು ಸಂಸ್ಕೃತ ನೀಗಿಸಿಕೊಟ್ಟಿದೆ. ಒಂದು ಹಂತದಲ್ಲಿ ಭಾಷೆಯಲ್ಲಿರುವ ವೈಜ್ಞಾನಿಕತೆಯೇ ಈ ಭಾಷೆಯನ್ನು ಜನರು ದೂರ ಮಾಡಲು ಕಾರಣವಾಗಿರಬಹುದು ಎಂಬ ಆತಂಕ ಮೂಡಿದೆ. ಸಂಸ್ಕೃತದಲ್ಲಿರುವ ವೈಜ್ಞಾನಿಕತೆಯನ್ನು ತಿಳಿಯಲು ಜನರು ಆಸಕ್ತಿ ತೋರದೇ ನಿರಾಸಕ್ತರಾಗಿರಬಹುದು. ಕಲಿಕೆಯ ಹಂತದಲ್ಲಿನ ವಿದ್ಯಾರ್ಥಿಗಳಲ್ಲಿ ಚಿಂತನೆಯ ಪ್ರವೃತ್ತಿ ಬಂದರೆ ಸಂಸ್ಕೃತ ಭಾಷೆ ಉಳಿಸಿಕೊಳ್ಳಬಹುದಾಗಿದೆ ಎಂದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಂಸ್ಕೃತಾಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಂಸ್ಕೃತ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿಲ್ಲ. ಕುಲಪತಿಗಳಿಗೆ ಆಡಳಿತ ಜ್ಞಾನ ಮಾತ್ರವಿದ್ದರೆ ಸಾಕಾಗುವದಿಲ್ಲ. ಸಂಸ್ಕೃತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಭಾಷೆಯ ಕುರಿತು ಶ್ರದ್ಧಾ ಭಕ್ತಿ ಹೊಂದಿರುವವರನ್ನು ಕುಲಪತಿಗಳಾಗಿ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ನೇಮಕ ಮಾಡಬೇಕಿದೆ ಎಂದರು.

ಹಿರಿಯ ವಿದ್ವಾಂಸ, ನಿವೃತ್ತ ಸಂಸ್ಕೃತ ಶಿಕ್ಷಕ ಕಿಚ್ಚಿಕೇರಿ ಮಹಾಬಲೇಶ್ವರ ಭಟ್ಟ ಅವರನ್ನು ‘ಶಾಸ್ತ್ರನಿಧಿ’ ಬಿರುದು ನೀಡಿ ಶ್ರೀಗಳು ಸನ್ಮಾನಿಸಿದರು. ಸಂಸ್ಕೃೋತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಆಯ್ದ ಕೆಲ ಭಾಷಣವನ್ನು ‘ಸ್ವರ್ಣಗಂಗ’ ಶೀರ್ಷಿಕೆಯ ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಲಾಯಿತು. ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಸೂರ್ಯನಾರಾಯಣ ಭಟ್, ಸಂಸ್ಥೆಯ ಕಾರ್ಯದರ್ಶಿ ಶಿವರಾಮ ಭಟ್ ಇತರರಿದ್ದರು.

ಹವ್ಯಕ ಮಹಾಸಭೆ ಖಂಡನೆ ಪ್ರಕಟಣೆ ಹಿಂಪಡೆದರೆ ಗೊಂದಲ ಮುಗಿಯಲಿದೆ: ಹವ್ಯಕ ಮಹಾಸಭೆಯವರು ತುರ್ತು ಸಭೆ ಸೇರಿ ಸನಾತನ ಧರ್ಮ ಸಭಾ ನಿರ್ಣಯವನ್ನು ಖಂಡಿಸಿ ನೀಡಿದ ಪ್ರಕಟಣೆಯನ್ನು ವಾಪಸ್ ಪಡೆದರೆ 2ನೇ ವಿಶ್ವ ಹವ್ಯಕ ಮಹಾಸಭೆಯಲ್ಲಿ ಪಾಲ್ಗೊಳ್ಳುವ ಕುರಿತಾದ ಗೊಂದಲ ಸಂಪೂರ್ಣ ಮುಗಿಲಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.

ಶ್ರೀಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಡಿ.28ರಿಂದ ಬೆಂಗಳೂರಿನಲ್ಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಬಾರದು ಎಂದು ಶಿಷ್ಯರು ನನಗೆ ಒತ್ತಾಯ ಮಾಡಲು ನಿರ್ಧರಿಸಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಹವ್ಯಕ ಮಹಾಸಭೆ ಅನೇಕ ವರ್ಷಗಳಿಂದ ತಾರತಮ್ಯ ಧೋರಣೆ ನಡೆಸಿಕೊಂಡು ಬಂದಿದೆ. ನಮ್ಮ ಗುರುಪೀಠಕ್ಕೆ ಸೂಕ್ತ ಗೌರವ ನೀಡುತ್ತಿಲ್ಲ ಎಂಬ ಭಾವನೆ ಶಿಷ್ಯರಲ್ಲಿ ಮೂಡಿರುವುದು ಈ ಒತ್ತಡಕ್ಕೆ ಕಾರಣವಾಗಿರಬಹುದು. ಹವ್ಯಕ ಮಹಾಸಭೆಯ ಪದಾಧಿಕಾರಿಗಳು ಭೇಟಿಯಾದಾಗ ‘ನಮ್ಮ ಗುರುಪೀಠಕ್ಕೆ ಸೂಕ್ತ ಗೌರವ ಸಿಗುವಂತಾಗಬೇಕು’ ಎಂಬ ಶಿಷ್ಯರ ಅಹವಾಲು ಅವರಿಗೆ ತಲುಪಿಸಿದ್ದಾರೆ. ಹವ್ಯಕ ಮಹಾಸಭೆ ಈಗಾಗಲೇ ಕೆಲ ತಿದ್ದುಪಡಿ ಮಾಡಿಕೊಂಡಿದೆ. ಇನ್ನೂ ಕೆಲವು ತಿದ್ದುಪಡಿ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ. ಹವ್ಯಕ ಮಹಾಸಭೆಯವರು ಈ ಕುರಿತು ತುರ್ತು ಸಭೆ ನಡೆಸಿ ಖಂಡನೆಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಲ್ಲಿ ವಿಶ್ವ ಹವ್ಯ ಸಮ್ಮೇಳನ ಯಾವುದೇ ಗೊಂದಲವಿಲ್ಲದೇ ನಡೆಯಲಿದೆ’ ಎಂದರು.