ಸಾಗರ: ಅವಧಿ ಮುಗಿದಿರುವ ಗ್ರಾಪಂಗಳಿಗೆ ನಾಮನಿರ್ದೇಶನ ಆಡಳಿತ ಸಮಿತಿ ನೇಮಿಸಲು ಮುಂದಾಗಿರುವ ಕ್ರಮ ಖಂಡಿಸಿ ಮೇ 21ರಂದು ಎಸಿಗೆ ಮನವಿ ಸಲ್ಲಿಸಲಾಗುವುದು ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ರಾಜ್ಯದ 6,024 ಗ್ರಾಪಂಗಳ ಅವಧಿ ಮುಗಿಯಲಿದೆ. ಕರೊನಾ ಹಿನ್ನೆಲೆಯಲ್ಲಿ ಅವಧಿ ಮುಗಿದಿರುವ ಗ್ರಾಪಂಗಳಿಗೆ ಆಡಳಿತ ಸಮಿತಿ ನೇಮಿಸಲು ಮುಂದಾಗಿರುವ ಕ್ರಮ ಅವೈಜ್ಞಾನಿಕ. ಸರ್ಕಾರದ ಇಂತಹ ನಿರ್ಧಾರದಿಂದ ಸ್ಥಳೀಯ ನಾಯಕತ್ವ ಬೆಳವಣಿಗೆಗೆ ಧಕ್ಕೆ ಉಂಟಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಾಜಿ ಸ್ಪೀಕರ್ ರಮೇಶ್ಕುಮಾರ್ ಸ್ಥಳೀಯ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪರಿಣಾಮಕಾರಿ ವರದಿ ನೀಡಿದ್ದಾರೆ. ಮೀಸಲಾತಿ ಅವಧಿ ವಿಸ್ತರಿಸಿದ್ದರಿಂದ ಸ್ಥಳೀಯ ನಾಯಕತ್ವ ಬೆಳವಣಿಗೆಗೆ ಅನುಕೂಲವಾಗಿದೆ. ಗ್ರಾಪಂ ಮೂಲಕ ಒಬ್ಬ ಸದಸ್ಯ ತಾಪಂ, ಜಿಪಂ ಹಾಗೂ ಶಾಸನ ಸಭೆಗೆ ಸ್ಪರ್ಧಿಸಲು ಅನುಕೂಲವಾಗುತ್ತಿತ್ತು ಎಂದರು.
ಹಾಲಿ ಗ್ರಾಪಂನಲ್ಲಿ ಅಧ್ಯಕ್ಷರು, ಸದಸ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕರೊನಾ ಸಂದರ್ಭ ಆಶಾ, ಆರೋಗ್ಯ, ಅಂಗನವಾಡಿ ಕಾರ್ಯಕರ್ತೆಯರ ಜತೆ ರೋಗ ನಿರ್ವಹಣೆ ಜಾಗೃತಿಗೆ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಸರ್ಕಾರ ಪ್ರಸ್ತುತ ಗ್ರಾಪಂ ಜನಪ್ರತಿನಿಧಿಗಳನ್ನು ಮುಂದಿನ 6 ತಿಂಗಳಿಗೆ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಶಾಸಕ ಹರತಾಳು ಹಾಲಪ್ಪ ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಎಂಪಿ ಬಿ.ವೈ.ರಾಘವೇಂದ್ರ ಜತೆ ಉತ್ತಮ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಹಾಲಪ್ಪ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಇತ್ತೀಚೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಜತೆ ಹೆಚ್ಚು ಒಡನಾಟ ಹೊಂದುತ್ತಿದ್ದು, ಕಾಂಗ್ರೆಸ್ಗೆ ಬಂದರೂ ಬರಬಹುದು ಎಂದರು.
ಜಿಪಂ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಮುಂದಿನ ವಿಧಾನಪರಿಷತ್ ಚುನಾವಣೆಗೆ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಗ್ರಾಪಂ ಆಡಳಿತ ಸಮಿತಿ ನೇಮಿಸುವ ಹುನ್ನಾರ ನಡೆಸುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಿಗೆ ಗ್ರಾಪಂ ಪರಿಕಲ್ಪನೆ ಇದ್ದಂತೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಗಣಪತಿ ಹೆನಗೆರೆ, ನಾಗರಾಜ ಮಜ್ಜಿಗೆರೆ, ಗಣರಾಜ್, ಮಂಜಪ್ಪ, ಮಂಜುನಾಥ್ ಇದ್ದರು.