ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಲಕ್ಷ್ಮೇಶ್ವರ: ಸಾಲಭಾದೆ ತಾಳದೆ ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಪಟ್ಟಣದ ರೈತರಾದ ಮಹಾಂತಪ್ಪ ಮಾಗಡಿ ಮತ್ತು ರಾಮಗೇರಿಯ ರಾಮಪ್ಪ ಬಿಶೆಟ್ಟಿ ಎಂಬುವವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಕುಟುಂಬದವರು ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಸ್ಥರು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಮಾಹಿತಿ ನೀಡಿ, ಇದುವರೆಗೂ ನಮಗೆ ಪರಿಹಾರ ಹಣ ದೊರೆತಿಲ್ಲ. ಈ ಕುರಿತು ತಹಸೀಲ್ದಾರರು, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು, ಕೃಷಿ ಸಚಿವ ಮತ್ತು ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸಿದ್ದೇವೆ. ಇಷ್ಟೆಲ್ಲ ಹೋರಾಟದ ಫಲವಾಗಿ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕುಟುಂಬ ನಿರ್ವಹಣೆಗಾಗಿ ಕೇವಲ 25 ಸಾವಿರ ರೂ. ಪರಿಹಾರ ಕಲ್ಪಿಸಿರುವ ಬಗ್ಗೆ ಪತ್ರ ಬಂದಿದೆ. ಆದರೆ, ನಮಗೆ 5 ಲಕ್ಷ ರೂ. ಕೊಡಬೇಕು. 25 ಸಾವಿರ ರೂ.ಕೊಟ್ಟು ಮೂಗಿಗೆ ತುಪ್ಪ ಸವರುವುದು ರೈತರಿಗೆ ಮಾಡುವ ಅವಮಾನ ಮತ್ತು ಸರ್ಕಾರದ ಇಬ್ಬಗೆಯ ನೀತಿಯಾಗಿದೆ ಎಂದು ದೂರಿದರು.

ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ, ಈ ಪ್ರಕರಣ ಸರ್ಕಾರದ ಮಟ್ಟದವರೆಗೂ ತಲುಪಿದ್ದು ತಮ್ಮಿಂದ ಇದಕ್ಕೆ ಪರಿಹಾರ ಕಲ್ಪಿಸಲಾಗದು. ತಾವುಗಳು ಸಮಯ ವ್ಯರ್ಥ ಮಾಡದೇ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಎಂದು ಸೂಚಿಸಿದರು.

ಆದರೆ, ಇದಕ್ಕೆ ಒಪ್ಪದ ರೈತ ಕುಟುಂಬದವರು, ತಾವು ಈಗಾಗಲೇ ಸಾವಿರಾರು ರೂ. ಸಾಲ ಮಾಡಿ ಎಲ್ಲ ಕಡೆ ಹೋಗಿದ್ದೇವೆ. ಜೀವನವೇ ಸಾಕಾಗಿದೆ. ನ್ಯಾಯ ಸಿಗುವವರೆಗೂ ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದು ಮೃತ ರೈತ ಮಹಾಂತಪ್ಪನ ಪತ್ನಿ ರತ್ನವ್ವ ಮಾಗಡಿ, ಆನಂದ ಬಿಶೆಟ್ಟಿ, ರೈತ ಮುಖಂಡ ಶಿವು ಕಟಗಿ, ಮಂಜು ಮಾಂತಪ್ಪ ಮಾಗಡಿ ಧರಣಿ ಮುಂದುವರಿಸಿದ್ದಾರೆ.