ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ವಿರೋಧವಿದೆ

blank

ಶ್ರೀರಂಗಪಟ್ಟಣ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲು ನಾವು ಎಂದೂ ಒತ್ತಾಯಿಸಿಲ್ಲ. ಪ್ರಮುಖವಾಗಿ ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ನನ್ನಿಂದಲೇ ವಿರೋಧವಿದೆ ಎಂದು ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ಹಾಗೂ ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷ ತನ್ವೀರ್ ಸೇಠ್ ಹೇಳಿದರು.

ಪಟ್ಟಣದ ಗಂಜಾಂನ ಗುಂಬಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಲಾಂಛನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಶತಮಾನಗಳಿಂದಲೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಗುಂಬಜ್‌ನಲ್ಲಿ ಆಚರಿಸಿಕೊಂಡು ಬರುತ್ತಿದ್ದು, ಇದು ನಮ್ಮ ನಂಬಿಕೆಯ ವಿಚಾರವಾಗಿದೆ. ನಾವು ಟಿಪ್ಪು ಸುಲ್ತಾನರ ಸಿದ್ಧಾಂತಗಳನ್ನು ಅನುಸರಿಸಿ ಪ್ರಾರ್ಥನೆ ಮಾಡುತ್ತಿದ್ದೇವೆಯೇ ಹೊರತು ಸರ್ಕಾರವನ್ನು ಎಂದಿಗೂ ಜಯಂತಿ ಮಾಡಿ ಎಂದು ಮನವಿ ಮಾಡಿ ಒತ್ತಾಯಿಸಿಲ್ಲ. ರಾಜ್ಯ ಸರ್ಕಾರ ಕೆಲ ವರ್ಷ ಆಚರಣೆ ಮಾಡಿ ನಂತರ ನಿಲ್ಲಿಸಿದೆ. ಆದರೆ, ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವುದಕ್ಕೆ ನಾನೇ ವಿರುದ್ಧ ಇದ್ದೇನೆ. ಸರ್ಕಾರ ಟಿಪ್ಪು ಜಯಂತಿ ಮಾಡಿದರೂ ಆಚರಣೆ ಮಾಡುತ್ತೇವೆ, ಮಾಡಲಿಲ್ಲ ಅಂದರೂ ನಾವೇ ಆಚರಿಸುತ್ತೇವೆ. ಆದರೆ, ನಮ್ಮ ಆಚರಣೆಯನ್ನು ಧರ್ಮದ ಅನುಸಾರ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ಕೆಲವರು ಸಮಾಜದಲ್ಲಿ ಟಿಪ್ಪು ಎಂದರೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಅವರ ಆಡಳಿತ, ಸಿದ್ಧಾಂತಗಳನ್ನು ಎಲ್ಲರೂ ಗೌರವಿಸಬೇಕು. ಹಲವರು ಟಿಪ್ಪು ಅವರ ಚರಿತ್ರೆಯನ್ನು ಅನ್ಯಧರ್ಮೀಯ ವಿರೋಧಿ ಎಂದು ಬಿಂಬಿಸಲು ಮುಂದಾಗಿರುವುದು ವಿಷಾದಕರ. ಆದರೆ, ಟಿಪ್ಪು ಸುಲ್ತಾನ್ ಅವರ ಆಡಳಿತ ಕಾಲದಲ್ಲೇ ಶ್ರೀರಂಗಪಟ್ಟಣ ದಸರಾ ಆಚರಣೆ ಮಾಡಿದ್ದು, ಈ ಭಾಗದ ಪ್ರಾಂತ್ಯವನ್ನು ಅವರು ರಕ್ಷಣೆ ಮಾಡಿದ್ದಾರೆ. ಯಾರೂ ಯಾವುದೆ ಸಾರ್ವಜನಿಕ ಕಾರ್ಯಕ್ರಮವನ್ನು ಬಹಿರಂಗವಾಗಿ ಮಾಡುತ್ತಿಲ್ಲ. ನಾವೆಲ್ಲರು ಎಲ್ಲರ ಒಳಿತಿಗಾಗಿ ಇಂದು ಪ್ರಾರ್ಥನೆ ಮಾತ್ರ ಮಾಡಿದ್ದೇವೆ ಎಂದು ಹೇಳಿದರು.
ಬಳಿಕ ಟಿಪ್ಪು ಸಮಾಧಿಗೆ ಹೂವಿನ ಚಾದರ ಹೊದಿಸಿ, ಸುಗಂಧ ದ್ರವ್ಯಗಳ ಪ್ರೋಕ್ಷಣೆ ಹಾಗೂ ಪುಷ್ಪನಮನ ಅರ್ಪಿಸಿದರು. ಮೌಲ್ವಿಗಳ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮಂಡ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಮೊಖ್ತಾರ್, ಟಿಪ್ಪು ವಕ್ಫ್ ಎಸ್ಟೇಟ್ ಕಾರ್ಯದರ್ಶಿ ಇರ್ಫಾನ್ ಅಹಮದ್, ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಉಪಸ್ಥಿತರಿದ್ದರು.
—————
ಕಂಡಿದ್ದೆಲ್ಲವನ್ನು ವಕ್ಫ್ ಆಸ್ತಿ ಎನ್ನುವಂತಿಲ್ಲ
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಕುರಿತು ಶಾಸಕ ತನ್ವೀರ್ ಸೇಠ್ ಮಾತನಾಡಿ, ವಕ್ಫ್ ಕಾಯ್ದೆ ಕೇಂದ್ರ ಸರ್ಕಾರದ ಕಾಯ್ದೆ. ಪ್ರವಾದಿ ಮಹಮದ್‌ರ ಕಾಲದಿಂದಲೂ ವಕ್ಫ್ ಬಗ್ಗೆ ನಂಬಿಕೆ ಇದೆ. ದೇವರ ಹೆಸರಿಗೆ ಕೊಟ್ಟ ಭೂಮಿಯನ್ನು ಸಂರಕ್ಷಣೆ ಮಾಡುವುದು ವಕ್ಫ್‌ನ ಮೂಲ ಉದ್ದೇಶ. ನನ್ನನ್ನು ಸೇರಿದಂತೆ ಹಲವರು ವಕ್ಫ್ ಖಾತೆಯ ಮಂತ್ರಿಯಾಗಿ ಈ ಹಿಂದೆ ಕೆಲಸ ಮಾಡಿದ್ದಾರೆ. ಹಿಂದೆ ಎಂದೂ ವಕ್ಫ್ ವಿಚಾರದಲ್ಲಿ ಅಪಸ್ವರ ಕೇಳಿ ಬಂದಿಲ್ಲ. ಆದರೆ, ಇದ್ದಕ್ಕಿದ್ದ ಹಾಗೆ ಈಗ ವಕ್ಫ್ ವಿಚಾರದಲ್ಲಿ ಈ ರೀತಿ ಅಪಸ್ವರ ಏಕೆ ಬಂದಿದೆ ಎಂಬುದು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಂಡಿದ್ದೆಲ್ಲವನ್ನು ವಕ್ಫ್ ಆಸ್ತಿ ಎನ್ನುವಂತಿಲ್ಲ. ವಕ್ಫ್ ಮಂಡಳಿಗೆ ಯಾವ ಆಸ್ತಿ ಸೇರುತ್ತದೆಯೋ ಅಥವಾ ಇಲ್ಲ ಎಂಬುದನ್ನು ವಕ್ಫ್ ಟ್ರಿಬ್ಯುನಲ್ ತೀರ್ಮಾನ ಮಾಡುತ್ತದೆ. ಭೂಮಿಯ ಒಂದೊಂದು ತುಂಡು ಸಹ ಮಾಲೀಕತ್ವ ಹೊಂದಿದೆ. ಈ ವಿವಾದ ಸೃಷ್ಟಿಯಾಗಿರುವುದು ರಾಜಕೀಯ ಪ್ರೇರಿತವಲ್ಲ. ಆದರೆ, ರಾಜಕೀಯ ಬಣ್ಣ ಕೊಡಲಾಗುತ್ತಿದೆ. ರಾಜ್ಯದಲ್ಲಿ ಉಪಚುನಾವಣೆ ಇರುವ ಕಾರಣಕ್ಕೆ ವಕ್ಫ್ ಗೆ ಈಗ ಮಹತ್ವ ಸಿಗುತ್ತಿದೆ ಎಂದು ಟೀಕಿಸಿದರು.

ಈವರೆಗೂ ಯಾರೂ ವಕ್ಫ್ ವಿಚಾರವನ್ನು ಮಾತಾಡಿಯೇ ಇಲ್ಲ. ಈಗ ನೋಟಿಸ್ ಬಂದಿದೆ ಎಂದು ತಕರಾರು ಬರುತ್ತಿದೆ. ಇದನ್ನು ಬೀದಿ ರಂಪಾಟ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಕ್ರಮಕೈಗೊಳ್ಳಲು ಕಾನೂನು ಇದೆ. ತಪ್ಪಾಗಿದ್ದರೆ ತಪ್ಪಾಗಿದೆ ಎಂದು ಒಪ್ಪಿಕೊಳ್ಳುವ ಧೈರ್ಯ ಸಹ ತೋರಿಸಬೇಕು. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಬೀದಿಯಲ್ಲಿ ಮಾತನಾಡಿ ಸಂಘರ್ಷಕ್ಕೆ ಯಾರೂ ಎಡೆಮಾಡಿಕೊಡಬಾರದು ಎಂದರು.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…