ಸರ್ಕಾರಕ್ಕಿಲ್ಲ ರೈತರ ಕಾಳಜಿ

ದಾಬಸ್​ಪೇಟೆ: ಸರ್ಕಾರಗಳಿಗೆ ನಗರ ಪ್ರದೇಶದ ಬಗ್ಗೆ ಇರುವ ಕಾಳಜಿ ಗ್ರಾಮೀಣ ಪ್ರದೇಶ ರೈತರ ಮೇಲೆ ಇಲ್ಲ. ಇದರಿಂದ ರೈತ ಹಂತ ಹಂತವಾಗಿ ಷೋಷಣೆಗೆ ಒಳಗಾಗುತ್ತಿದ್ದಾನೆ ಎಂದು ಮೇಲಣಗವಿ ಮಠದ ಶ್ರೀ ಮಲಯ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸದ ಹಿನ್ನೆಲೆಯಲ್ಲಿ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಹೋನ್ನಮ್ಮಗವಿ ಮಠದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಸರಿಯಾದ ಮಾಹಿತಿ ಕೊರತೆ ಇದ್ದು, ಸರ್ಕಾರದ ಲಾಭವನ್ನು ಮದ್ಯವರ್ತಿಗಳು ಪಡೆದು ಶ್ರೀ ಮಂತರಾಗುತ್ತಿದ್ದಾರೆ. ರೈತರಿಗೆ ಸೌಲಭ್ಯ ದೊರಕುತ್ತಿಲ್ಲ. ರೈತರಿಗೆ ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ರೈತರು ಜಮೀನು ಉಳಿಕೊಳ್ಳಲು ಪ್ರಯತ್ನ ಮಾಡಬೇಕು. ಜಮೀನು ಸ್ವಾಧೀನ ಮಾಡಿಕೊಂಡರೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುವ ಸ್ಥಿತಿ ಬರುತ್ತದೆ. ಭೂಮಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಸ್ವಾಮೀಜಿಗಳ ಬೆಂಬಲ ಇರುತ್ತದೆ ಎಂದರು.

ಶ್ರೀ ಹೊನ್ನಮ್ಮಗವಿ ಮಠದ ಅಧ್ಯಕ್ಷ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರಿಗೆ ಸರ್ಕಾರ ನೀಡಿರುವ ಪರಿಹಾರ ಒಪ್ಪಿಗೆ ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಎಲ್ಲ ರೈತರು ಸಮ್ಮತಿಸಿದ್ದರೆ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರ ಇಂದಿನ ಭೂಮಿ ಬೆಲೆಗೆ ನಾಲ್ಕು ಪಟ್ಟು ಪರಿಹಾರವನ್ನು ಸರ್ಕಾರ ನೀಡಬೇಕು ಎಂದರು.

ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ರೈತ ಬಿ.ವಿ.ಶ್ರೀನಿವಾಸ್, ಎಲ್.ರುದ್ರಪ್ಪ. ಎನ್.ಬೆಟ್ಟಸ್ವಾಮಿಗೌಡ, ತಾಪಂ ಸದಸ್ಯ ಬಿ.ಚಂದ್ರಶೇಖರ್, ರೈತ ಸಂಘದ ಪದಾಧಿಕಾರಿಗಳಾದ ಬಿ.ಟಿ.ಲಕ್ಷ್ಮೀ ವೆಂಕಟೇಶ್, ವಿ.ಎನ್. ದೇವರಾಜು, ಬಿ.ಆರ್.ಗರುಡರಂಗಯ್ಯ, ಅವೆರಹಳ್ಳಿ ಬಸವರಾಜು, ಸುಮಾರು 9 ಗ್ರಾಮಗಳ ರೈತರು ಭಾಗವಹಿಸಿದ್ದರು.

ಸಂಕಷ್ಟದಲ್ಲಿ ರೈತ: ಸೋಂಪುರ ಹೋಬಳಿಯಲ್ಲಿ ಕೈಗಾರಿಕಾ ಪ್ರದೇಶಕ್ಕೆ 5ನೇ ಹಂತದಲ್ಲಿ ಸುಮಾರು 9 ಗ್ರಾಮಗಳಲ್ಲಿ 839 ಎಕರೆ ಜಮೀನನ್ನು 2012ರಲ್ಲೇ ಸ್ವಾಧೀನ ಮಾಡಿಕೊಂಡಿರುವ ಬಗ್ಗೆ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ನಿಯಮದನ್ವಯ ರೈತರು ಜಮೀನು ಮಾರುವ ಹಾಗಿಲ್ಲ ಹಾಗೂ ಭೋಗ್ಯಕ್ಕೂ ನೀಡುವಂತಿಲ್ಲ. ಇದರಿಂದ 6 ವರ್ಷಗಳಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಅಕ್ಟೋಬರ್ 25ರಂದು ಜಿಲ್ಲಾಧಿಕಾರಿ ಕರೀಗೌಡ ಅಧ್ಯಕ್ಷತೆಯಲ್ಲಿ ಭೂ ದರ ಸಲಹಾ ಸಮಿತಿ ಸಭೆ ನಡೆಸಿದರೂ ಫಲಪ್ರದವಾಗಿಲ್ಲ.