ಸರೀಸೃಪ ಪಾರ್ಕ್ ಸ್ಥಾಪನೆಗೆ ನಿರ್ಲಕ್ಷ್ಯ

ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ಸರೀಸೃಪ ಪಾರ್ಕ್ ಸ್ಥಾಪಿಸಲು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದರೂ ಇದುವರೆಗೂ ಪಾರ್ಕ್ ನಿರ್ವಿುಸಲು ಸ್ಪಂದನೆ ಬಂದಿಲ್ಲ ಎಂದು ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಪರಿಸರ ಸಮ್ಮೇಳನದಲ್ಲಿ ಮಾತನಾಡಿದರು.

ಘಾಟಿ ಕ್ಷೇತ್ರದಲ್ಲಿ ಹಾವಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಮೂಢನಂಬಿಕೆಯಿಂದ ಬಂದಿಲ್ಲ. ಕ್ಷೇತ್ರದ ಒಂದು ಕಾಲಕ್ಕೆ ಹಾವು ಸೇರಿ ವೈವಿಧ್ಯಮಯ ಸರೀಸೃಪಗಳ ತಾಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಸರಿಸೃಪಗಳು ಕಣ್ಮರೆಯಾಗಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಈ ಪ್ರದೇಶದಲ್ಲಿನ ಅರಣ್ಯದಲ್ಲಿ ಸರಿಸೃಪ ಪಾರ್ಕ್ ಸ್ಥಾಪನೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ನಂದಿಬೆಟ್ಟ ಅಪಾಯದ ಅಂಚಿನಲ್ಲಿದೆ. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ನಡೆಸಿರುವ ಅಧ್ಯಯನದ ಪ್ರಕಾರ ನಂದಿಬೆಟ್ಟದಲ್ಲಿನ ಜೀವವೈಧ್ಯ ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಲಿದೆ. ಬೆಟ್ಟದ ತಪ್ಪಲಿನಲ್ಲಿ ನಿರ್ವಣವಾಗುತ್ತಿರುವ ರೆಸಾರ್ಟ್, ಅಪಾರ್ಟ್​ವೆುಂಟ್​ಗಳು, ಇನ್ನಿತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರ್ವೀಸ್ ರಸ್ತೆಗಳ ನಿರ್ವಣದಂತೆ ಸಸಿ ನೆಟ್ಟು ಬೆಳೆಸಲು ಭೂ ಸ್ವಾಧೀನಮಾಡಿಕೊಳ್ಳುವ ಅಗತ್ಯ ಇದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ತಾಲೂಕಿನ ಘಾಟಿ ಕ್ಷೇತ್ರ ಸೇರಿ ಇತರೆಡೆಗಳಲ್ಲಿ ವಿಶೇಷವಾಗಿ ಎರಡು ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ನಗರದಲ್ಲಿ ರಸ್ತೆ ವಿಸ್ತರಣೆ ಕೆಲಸ ಮುಕ್ತಾಯವಾಗಿರುವ ಬಸವ ಭವನದ ವೃತ್ತದಿಂದ ನೆಲಮಂಗಲ ರಸ್ತೆಯ ಕನಕದಾಸ ವೃತ್ತದವರೆಗೂ ಅಕವಾಶ ಇರುವ ಸ್ಥಳದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಕೆಲಸಕ್ಕೆ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಅರಣ್ಯ ಭೂಮಿ ಇದೆ. ಆದರೆ ಅರಣ್ಯದಲ್ಲಿ ಮರಗಳಿರಲಿ, ಸಸಿಗಳೂ ಇಲ್ಲ. ಸರ್ಕಾರದಿಂದ ಹಾಗೂ ಶಾಸಕರ ನಿಧಿಯಿಂದ ಸಾಕಷ್ಟು ಹಣ ನೀಡಲಾಗಿದೆ. ಇಷ್ಟಾದರೂ ಅರಣ್ಯ ಬೆಳೆಸದಿರಲು ಏನು ಕಾರಣ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಪರಿಸರವಾದಿ ಕಿಶೋರ್, ರಾಜ್ಯ ರೈತ ಸಂಘದ ಸದಸ್ಯ ಸತೀಶ್, ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ, ನಿರ್ದೇಶಕಿ ಕವಿತಾ, ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿದರು. ಅರಣ್ಯ ಕುರಿತ ವರದಿಯನ್ನು ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ.ಶ್ರೀಕಾಂತ ಮಂಡಿಸಿದರು. ಎಪಿಎಂಸಿ ಅಧ್ಯಕ್ಷ ಮಂಜುನಾಥ್, ತಾಲೂಕು ಅರಣ್ಯಾಧಿಕಾರಿ ನಟರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *