ಸರಾಗ ಜೀರ್ಣಕ್ಕೆ ಸುಲಭ ಉಪಾಯ

ಮದುವೆ ಕಾರ್ಯಗಳ ಸೀಸನ್ ಬೇರೆ. ಆತ್ಮೀಯರು ಕರೆದಿದ್ದಾರೆ ಎಂದರೆ ಹೋಗದೆ ಇರಲಾಗುವುದೆ? ಊಟದ ಸಮಯಕ್ಕೆ ಹೋಗಿ ಗಡದ್ದಾಗಿ ಉಂಡು ಬರುವವರೇ ಹೆಚ್ಚು. ಒಂದೇ ದಿನ ಎರಡು ಮೂರು ಕಡೆ ಹೋಗುವವರೂ ಇದ್ದಾರೆ. ಆತಿಥ್ಯವು ಆರೋಗ್ಯಕ್ಕೆ ಪೂರಕವಾಗಿದ್ದಾಗ ಮಾತ್ರ ಆ ಆತಿಥ್ಯಕ್ಕೆ ಸರಿಯಾದ ಅರ್ಥ ಬರುತ್ತದೆ. ಅದೇ ತುಂಬಿಸುವ ತುಂಬುವ ಚೀಲ ಎಂದು ಭಾವಿಸಿ ಹೊಟ್ಟೆಯನ್ನು ತುಂಬಿಸುತ್ತ ಹೋದರೆ ಅದು ಸಮಸ್ಯೆಗೆ ನಾಂದಿಯಾಗಿಬಿಡುತ್ತದೆ. ಆದ್ದರಿಂದ ಈಗೀಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಹೆಚ್ಚಾಗಿ ಕಾಡುತ್ತಿವೆ. ಅತೀ ಹೆಚ್ಚು ಸೇವಿಸಿದಾಗ ಹೊಟ್ಟೆಯುಬ್ಬರ ಕಾಡುವುದು, ಅಸಿಡಿಟಿ, ಹೊಟ್ಟೆ ತೊಳೆಸಿದಂತಾಗುವುದು, ವಾಂತಿ, ಭೇದಿ ಸಾಮಾನ್ಯ.

ಸೇವಿಸುವ ಆಹಾರ ಸಮತೋಲಿತವಾಗಿರದೆ ಕಡಿಮೆ ಪ್ರಮಾಣದ ನಾರಿನಂಶವನ್ನು ಹೊಂದಿದ್ದರೆ ಅದು ಮಲಬದ್ಧತೆಗೆ ಕಾರಣವಾಗಿಬಿಡುತ್ತದೆ. ದಿನಕ್ಕೆ ಐದರಿಂದ ಆರು ಬಾರಿ ತಿಂದರೂ ಒಮ್ಮೆ ಮಲವಿಸರ್ಜನೆಗೂ ಕಷ್ಟಪಡುವವರಿದ್ದಾರೆ. ಕೇಸರಿಭಾತ್, ಜಿಲೇಬಿ, ಹೋಳಿಗೆ, ಚಕ್ಕುಲಿ, ಬೋಂಡಾ, ಪೂರಿ ಎಂದು ತಿನ್ನುತ್ತಿದ್ದಲ್ಲಿ ಅಸಮತೋಲಿತ ಆಹಾರವು ಆರೋಗ್ಯ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಸೇವಿಸುವ ಆಹಾರ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಎಚ್ಚರಿಕೆ ಬೇಕು. ಈ ಆಹಾರಗಳೊಂದಿಗೆ ಪೂರಕ ಆಹಾರಗಳನ್ನೂ ಸಮಯೋಚಿತವಾಗಿ ಸೇವಿಸುವುದರಿಂದ ಆರೋಗ್ಯ ನಿರ್ವಹಣೆ ಸುಲಭಸಾಧ್ಯ.

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸಮಸ್ಯೆಯು ಹತೋಟಿಗೆ ಬರಲು ಸಹಾಯವಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಚೆನ್ನಾಗಿ ನೀರು ಕುಡಿಯಬೇಕು. ಒಳಕ್ಕೆ ಹೋದ ನೀರು, ‘ಹೊಟ್ಟೆ ತುಂಬಿದೆ, ಕಶ್ಮಲವನ್ನು ಹೊರಹಾಕು; ಎಂಬುದಾಗಿ ಕರುಳಿಗೆ ಒಂದು ಸಂದೇಶವನ್ನು ರವಾನಿಸುತ್ತದೆ. ತನ್ಮೂಲಕ ಮಲವಿಸರ್ಜನೆ ಸರಿಯಾಗಿ ಆಗಲು ಸಾಧ್ಯವಾಗುತ್ತದೆ. ಉಷಃಪಾನ ಮಾಡಿ 15ರಿಂದ 20 ನಿಮಿಷಗಳ ಕಾಲದ ನಡಿಗೆಯ ನಂತರ ಉತ್ತಮ ಪರಿಣಾಮ ಬೀರುತ್ತದೆ.

ನಾರಿನಂಶಯುಕ್ತ ಆಹಾರಗಳನ್ನು ತೆಗೆದುಕೊಳ್ಳಬೇಕು. ಇದು ಸರಾಗವಾಗಿ ಮಲವಿಸರ್ಜನೆಗೆ ಅನುವು ಮಾಡಿಕೊಡುತ್ತದೆ. ನೆನೆಸಿದ ಮೆಂತ್ಯ (ಮೊಳಕೆ ಬರಿಸಿ ಸಹ ಸೇವಿಸಬಹುದು), ಬೆಂಡೆಕಾಯಿ, ಹಣ್ಣು, ತರಕಾರಿಗಳು, ಹಸಿರುಸೊಪ್ಪುಗಳು ಹೆಚ್ಚಿನ ನಾರಿನಂಶ ಹೊಂದಿರುತ್ತದೆ. ಪೇರಲೆ ಹಣ್ಣು, ಬಾಳೆಹಣ್ಣನ್ನು ಹೆಚ್ಚು ಸೇವಿಸಿ. ಸೇಬು ಜ್ಯೂಸ್​ನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಮಲಗುವ ಮೊದಲು ಒಂದು ಬೌಲ್ ಮಾವಿನಹಣ್ಣು ಸೇವನೆಯೂ ಮಲಬದ್ಧತೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಪಪ್ಪಾಯವನ್ನು ರಾತ್ರಿ ಮಲಗುವ ಮೊದಲು ಸೇವಿಸುವುದೂ ಮರುದಿನ ಬೆಳಗ್ಗೆ ಸರಿಯಾಗಿ ಮಲವಿಸರ್ಜನೆ ಆಗಲು ಅನುಕೂಲಕಾರಿ.

ಅರ್ಧ ಇಂಚು ಶುಂಠಿಗೆ ಹಸಿ ಪಾಲಕ್ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಹತೋಟಿಗೆ ಬರುತ್ತದೆ. ಇದಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಬೇಕು. ಅಗಸೆಬೀಜ ಹಾಗೂ ಕಪ್ಪು ಎಳ್ಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಮೆಂತ್ಯಪುಡಿಯನ್ನು ಸೇರಿಸಿ ತುಪ್ಪ ಬಳಸಿ ಲೇಹ್ಯ ತಯಾರಿಸಿಕೊಳ್ಳಬೇಕು.(ತುಪ್ಪ ಆಗದವರು ಹಾಲನ್ನು ಬಳಸಬಹುದು.) ಅರ್ಧ ಚಮಚ ಈ ಲೇಹ್ಯವನ್ನು ಸೇವಿಸಿ ನಂತರ ಬಿಸಿ ನೀರು ಕುಡಿಯುತ್ತ ಬಂದರೆ ಮಲಬದ್ಧತೆ ಕಡಿಮೆ ಆಗುತ್ತದೆ.

ಅರ್ಧದಿನ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸುವುದೂ ತೊಂದರೆಯ ಹತೋಟಿಗೆ ಸಹಕಾರಿ. ಈ ರೀತಿಯ ಮಿತವ್ಯಯಿ, ಸುಲಭ ಉಪಾಯಗಳಿಂದ ಮಲಬದ್ಧತೆಯನ್ನು ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ.