ಸರಣಿ ಅಪಘಾತ, ಪ್ರಯಾಣಿಕರಿಗೆ ಗಾಯ

ಬೆಳಗಾವಿ: ತಾಲೂಕಿನ ಹೊನಗಾ ಗ್ರಾಮದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ, ಕಾರು ಮತ್ತು ಟ್ರ್ಯಾಕ್ಟರ್ ಸರಣಿ ಅಪಘಾತದಲ್ಲಿ ಟೆಂಪೋದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವರಾತ್ರಿ ಉತ್ಸವ ಅಂಗವಾಗಿ ಬುಧವಾರ ಬೆಳಗ್ಗೆ ವಂಟಮೂರಿ ಮತ್ತು ಸುತ್ತಮುತ್ತಲಿನ ಭಕ್ತರು ಸವದತ್ತಿ ಯಲ್ಲಮ್ಮಗುಡ್ಡಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತ ಟೆಂಪೋ ಹೊನಗಾ ಬಳಿ ಇಳಿಜಾರು ರಸ್ತೆಯಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪಿದ್ದರಿಂದ ಮುಂದೆ ಹೋಗುತ್ತಿದ್ದ ಕಾರು ಮತ್ತು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.

ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಪಕ್ಕದ ಗಟಾರಕ್ಕೆ ಇಳಿದರೆ, ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಹೊಸ ವಂಟಮೂರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ಮಾರುತಿ ಚೌಗುಲಾ ಮತ್ತು ಅವರ ಕುಟುಂಬ ಸದಸ್ಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.