ಸಮ ಸಮಾಜ ನಿರ್ಮಾತೃ ಕೆಂಪೇಗೌಡ

ಮುಳಬಾಗಿಲು: ನಾಡಪ್ರಭು ಕೆಂಪೇಗೌಡರ ಆಳ್ವಿಕೆಯಲ್ಲಿ ಸಮಾಜದ ಎಲ್ಲ ವರ್ಗಗಳಿಗೆ ಆದ್ಯತೆ ನೀಡುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಿದ್ದರು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಪೀಠಾಧಿಪತಿ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಡಿವಿಜಿ ಗಡಿಕನ್ನಡ ಭವನದಲ್ಲಿ ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಸೆಸ್ಸೆಲ್ಸಿ, ಪಿಯು ಮತ್ತು ಉನ್ನತ ಶಿಕ್ಷಣದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಕೆರೆ-ಕುಂಟೆ ನಿರ್ಮಾಣ ಸೇರಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದರು. ಕುವೆಂಪು ವಿಶ್ವಮಾನವ ಸಂದೇಶಗಳನ್ನು ರವಾನಿಸುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಯತ್ನ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಜತೆಗೆ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪಾಲಕರು ಕುಟುಂಬದಲ್ಲೇ ಸರಳ ಮತ್ತು ಸುಸಂಸ್ಕೃತ ಜೀವನ ನಡೆಸಬೇಕು. ಆಗ ಮಕ್ಕಳು ನಿಮ್ಮಂತೆಯೇ ಮುನ್ನಡೆಯುತ್ತಾರೆ ಎಂದು ಕಿವಿಮಾತು ಹೇಳಿದರು.

ಒಕ್ಕಲಿಗ ಸಮಾಜ ಹಿಂದಿನಿಂದಲೂ ಗುರು-ಹಿರಿಯರನ್ನು ಗೌರವಿಸಿಕೊಂಡು ಬರುವ ಪರಂಪರೆ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಬೇರೆ ಸಮಾಜದ ಸ್ವಾಮೀಜಿಗಳನ್ನು ಸಮುದಾಯದ ಸಭೆ ಸಮಾರಂಭಗಳಿಗೂ ಆಹ್ವಾನಿಸುವುದು ಒಕ್ಕಲಿಗ ಸಮಾಜದಲ್ಲಿ ಮಾತ್ರ ಕಾಣಬಹುದು ಎಂದರು.

ಪಾಶ್ಚಿಮಾತ್ಯ ದೇಶಗಳು ಸುಸಂಸ್ಕೃತ ದೇಶಗಳಾಗುತ್ತಿವೆ. ಇತ್ತೀಚೆಗೆ ಅಮೆರಿಕದ ಆದಿಚುಂಚನಗಿರಿ ಶಾಖಾಮಠಕ್ಕೆ ಭೇಟಿ ನೀಡಿದ್ದಾಗ ಒಂದೇ ಒಂದು ಅಶ್ಲೀಲ ವಾಲ್‌ಪೋಸ್ಟ್ ಕಂಡಿಲ್ಲ. ಆದರೆ, ನಮ್ಮಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ ಗೋಡೆಗಳಲ್ಲಿ ಅಶ್ಲೀಲ ಚಿತ್ರಗಳು ರಾರಾಜಿಸುತ್ತಿವೆ. ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಪರಿಸರ ಸಂರಕ್ಷಣೆ, ಶುಚಿತ್ವ, ಸುಸಂಸ್ಕೃತ ವಾತಾವರಣ ಪ್ರತಿ ಮನೆಯಿಂದ ಉದ್ಭವವಾಗಬೇಕು ಎಂದರು.
ಜೈವಿಕ ತಂತ್ರಜ್ಞಾನ ಸೌಲಭ್ಯ ಕೋಶ ಕೆಬಿಟ್ಸ್ ಮಾಜಿ ಮುಖ್ಯಸ್ಥ ಡಾ.ಮಿಟ್ಟೂರು ಎನ್.ಜಗದೀಶ್ ಮಾತನಾಡಿ, ಮಾನವ ಮೂಲ ಸೌಲಭ್ಯಗಳ ಹೆಸರಿನಲ್ಲಿ ಪ್ರಕೃತಿಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ನದಿ, ಸರೋವರಗಳನ್ನು ಮಲಿನ ಮಾಡಿ ಭೂಮಿಯನ್ನು ವಿಷಪೂರಿತ ಮಾಡುತ್ತಿದ್ದಾನೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಆಲಂಗೂರು ಶಿವಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್, ಬಂಗಾರಪೇಟೆ ಡಿವೈಎಸ್‌ಪಿ ಶಿವಕುಮಾರ್, ಮುಳಬಾಗಿಲು ಡಿವೈಎಸ್‌ಪಿ ಬಿ.ಕೆ.ಉಮೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಧವಲ್ಲಭ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಜಿಪಂ ಸದಸ್ಯ ವಿ.ಎಸ್.ಅರವಿಂದ್‌ಕುಮಾರ್, ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಸಾದ್‌ರೆಡ್ಡಿ, ಕಾರ್ಯದರ್ಶಿ ಸಂಗಸಂದ್ರ ಸೀನಪ್ಪ, ಖಜಾಂಚಿ ಎಸ್.ಎನ್.ವೆಂಕಟರವಣಪ್ಪ, ನಗರಸಭೆ ಮಾಜಿ ಸದಸ್ಯ ಜಗನ್ಮೋಹನರೆಡ್ಡಿ ಇದ್ದರು.

Leave a Reply

Your email address will not be published. Required fields are marked *