ಸಮ ಸಮಾಜಕ್ಕೆ ಬಸವ ತತ್ವ ಸಾಥ್

ಹೊಸದುರ್ಗ: ಪ್ರತಿಯೊಬ್ಬರಲ್ಲೂ ಭಗವಂತನ ಸಾನ್ನಿಧ್ಯವಿದೆ ಎಂಬದನ್ನು ಅರಿತು ಗೌರವಿಸುವ ಭಾವ ಜಾಗೃತವಾದರೆ ಸಮಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶರಣ ಸಂಗಮ, ಬಸವ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜ ಸರಿದಾರಿಗೆ ತರಲು ಬಸವಣ್ಣನ ತತ್ವ ಸಂದೇಶಗಳು ಸರ್ವಕಾಲಿಕ ಎಂದರು.

ಬಸವಣ್ಣ ಸಮಾಜ ಸುಧಾರಕರಾಗಿ ಬದುಕಿನ ಸತ್ಯದರ್ಶನ ಮಾಡಿಸಿದ್ದಾರೆ. ಅವರು ಯಾವುದೇ ಜಾತಿ, ವರ್ಗಕ್ಕೆ ಸೀಮಿತರಲ್ಲ. ಬಸವ ತತ್ವದಿಂದ ಅಸಮಾನತೆ ಕಳೆದು ಮಾನವೀಯ ಮೌಲ್ಯ ಜಾಗೃತವಾಗುತ್ತದೆ.

ಬಸವ ಜಯಂತಿಯನ್ನು ಸಾರ್ವತ್ರಿಕಗೊಳಿಸಿದ ಕೀರ್ತಿ ದಾವಣಗೆರೆ ವಿರಕ್ತ ಮಠಕ್ಕೆ ಸಲ್ಲುತ್ತದೆ. ಮಠದಲ್ಲಿ 1913ರಿಂದ ಬಸವ ಜಯಂತ್ಯುತ್ಸವ ಆಚರಿಸಲಾಗುತ್ತಿದೆ. ಜಯಂತಿ ಹೆಸರಲ್ಲಿ ರಾಸುಗಳನ್ನು ಪೂಜಿಸುವ ಪದ್ಧತಿ ಬದಲು ಜೀವನದಲ್ಲಿ ಬಸವಣ್ಣನ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತಿ ನಿಸಾರ್ ಅಹಮದ್ ಮಾತನಾಡಿ, ಬಸವಣ್ಣ ಮನುಕುಲದ ಶಕ್ತಿ. ಅನುಭವ ಮಂಟಪ ಸ್ಥಾಪಿಸಿ ಶೋಷಿತ ಸಮಾಜಗಳಿಗೆ ಮನ್ನಣೆ ನೀಡಿದ ಸಮಾಜ ಸುಧಾರಕ. ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಪ್ರಾಮಾಣಿಕ ಪ್ರಯತ್ನ ಶರಣರ ಕಾಲದಿಂದ ಆರಂಭವಾಯಿತು ಎಂದರು.

ಅಮೃತ ವರ್ಷಿಣಿ ಕಲಾ ತಂಡದ ಮೂರ್ತಿ ಮತ್ತು ಸಂಗಡಿಗರು ವಚನ ಹಾಡಿದರು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಬಿಇಒ ಎಲ್. ಜಯಪ್ಪ, ಜಿಪಂ ಮಾಜಿ ಸದಸ್ಯ ಆರ್.ಹನುಮಂತಪ್ಪ, ಕೆ.ಎಸ್. ಕಲ್ಮಠ್, ಎಚ್.ಪಿ. ಜಗದೀಶ್, ಆರ್. ತಮ್ಮಣ್ಣ ಇತರರಿದ್ದರು.

Leave a Reply

Your email address will not be published. Required fields are marked *